ಮುಂಬೈ: ಮುಂಬರುವ 2020 ರ 7ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಸರಣಿ ಆತಿಥ್ಯದ ಜವಾಬ್ದಾರಿಯನ್ನು ಆಸ್ಟ್ರೇಲಿಯಾಗೆ ನೀಡಲಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಸೆಮಿಫೈನಲ್ ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿರುವ ಭಾರತ ತಂಡ ಮತ್ತೆ ಚುಟುಕು ಕ್ರಿಕೆಟ್ ನ ವಿಶ್ವಕಪ್ ಗೆಲ್ಲಬೇಕು ಅಂದರೆ 2020ರವರೆಗೂ ಕಾಯಲೇಬೇಕಿದೆ. ಏಕೆಂದರೆ ಇಲ್ಲಿಯವರೆಗೂ 2 ವರ್ಷಗಳಿಗೊಮ್ಮೆ ನಡೆಯುತ್ತಿದ್ದ ಟಿ20 ವಿಶ್ವಕಪ್ ನ ಅಂತರವನ್ನು ಐಸಿಸಿ ಬದಲಾಯಿಸಿದ್ದು, 2 ವರ್ಷಗಳ ಬದಲಿಗೆ ಏಕದಿನ ವಿಶ್ವಕಪ್ ಸರಣಿಯಂತೆ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲು ನಿರ್ಧರಿಸಿದೆ.
ಹೀಗಾಗಿ ಮುಂದಿನ ಟಿ20 ವಿಶ್ವಕಪ್ 2020ರಲ್ಲಿ ನಡೆಯಲಿದ್ದು, ಸರಣಿಗೆ ಆಸ್ಟ್ರೇಲಿಯಾ ಆತಿಥ್ಯವಹಿಸಲಿದೆ. 2015 ಏಕದಿನ ವಿಶ್ವಕಪ್ ಅನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳು ಜಂಟಿಯಾಗಿ ಯಶಸ್ವಿಯಾಗಿ ಆಯೋಜಿಸಿದ್ದವು. 2007 ರಲ್ಲಿ ಆರಂಭವಾದ ಟಿ-20 ವಿಶ್ವಕಪ್ ಸರಣಿಗೆ ದಕ್ಷಿಣ ಆಫ್ರಿಕಾ ಆತಿಥ್ಯವಹಿಸಿತ್ತು.
ಇನ್ನು ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ 6ನೇ ಆವೃತ್ತಿಯ ಟಿ20 ವಿಶ್ವಕಪ್ ಅಂತಿಮ ಹಂತದಲ್ಲಿದ್ದು, ಇದೇ ಏಪ್ರಿಲ್ 3 ಭಾನುವಾರದಂದು ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಫೈನಲ್ ಪಂದ್ಯಕ್ಕಾಗಿ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನ ಸಕಲ ರೀತಿಯಲ್ಲಿಯೂ ಸಜ್ಜಾಗಿದ್ದು, 2016ರ ಟಿ20 ವಿಶ್ವಕಪ್ ಕಿರೀಟ ಯಾರ ಮುಡಿಗೇರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಆ ಮೂಲಕ ಟೂರ್ನಿಗೆ ವಿದ್ಯುಕ್ತ ತೆರೆ ಬೀಳಲಿದೆ.