ಮುಂಬೈ: ಮಹಾರಾಷ್ಟ್ರದಲ್ಲಿ ನೀರಿಗೆ ಬರ ಇದ್ದು, ಐಪಿಎಲ್ ಪಂದ್ಯವನ್ನು ರಾಜ್ಯದಿಂದ ಸ್ಥಳಾಂತರಿಸುವ ವಿಚಾರವನ್ನು ಪರಿಗಣಿಸುವಂತೆ ಬಾಂಬೆ ಹೈಕೋರ್ಟ್ ಮಂಗಳವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಸೂಚಿಸಿದೆ.
ಐಪಿಎಲ್ ಸ್ಥಳಾಂತರಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಬರ ಪೀಡಿತ ಪ್ರದೇಶಕ್ಕೆ ಬಳಕೆಯಾಗಿದ್ದ 40 ಲಕ್ಷ ಲೀಟರ್ ನೀರನ್ನು ಒದಗಿಸಲು ಬಿಸಿಸಿಐಗೆ ಸಾಧ್ಯವೇ ಎಂದು ಪ್ರಶ್ನಿಸಿತು. ಅಲ್ಲದೆ ಮುಖ್ಯಮಂತ್ರಿ ಬರ ಪರಿಹಾರ ನಿಧಿಗೆ ಬಿಸಿಸಿಐ ಎಷ್ಟು ದೇಣಿಗೆ ನೀಡಿದೆ ಎಂದು ಪ್ರಶ್ನಿಸಿತು. ಅಂತಿಮವಾಗಿ ಕೆಲವು ಪಂದ್ಯಗಳನ್ನು ಪುಣೆ ಮತ್ತು ಮುಂಬೈಯಿಂದ ಸ್ಥಳಾಂತರಿಸುವಂತೆ ಬಿಸಿಸಿಐಗೆ ಕೋರ್ಟ್ ಸೂಚಿಸಿತು.
ಇದಕ್ಕು ಮುನ್ನ ಮುಂಬೈ ಮತ್ತು ಪುಣೆಗಳಲ್ಲಿ ನಡೆಯುವ 17 ಐಪಿಎಲ್ ಪಂದ್ಯಗಳಿಗೆ ಮೈದಾನದ ಪಿಚ್ ನಿರ್ವಹಣೆಗೆ ಶುದ್ಧೀಕರಿಸಿದ ಚರಂಡಿ ನೀರನ್ನು ಬಳಸಿಕೊಳ್ಳಲಾಗುವುದು ಎಂದು ಬಿಸಿಸಿಐ ಕೋರ್ಟ್ ಗೆ ತಿಳಿಸಿತ್ತು.
ಮಹಾರಾಷ್ಟ್ರದಲ್ಲಿ ಜನರು ತೀವ್ರ ಬರಗಾಲ ಎದುರಿಸುತ್ತಿರುವಾಗ ಐಪಿಎಲ್ ಆಟಕ್ಕಾಗಿ ಕ್ರಿಕೆಟ್ ಪಿಚ್ ಗಳ ನಿರ್ವಹಣೆಗೆಂದು ಪ್ರತಿದಿನ ಲಕ್ಷಾಂತರ ಲೀಟರ್ ನೀರನ್ನು ದುರುಪಯೋಗಪಡಿಸಲಾಗುತ್ತಿದೆ ಎಂದು ಪ್ರಜಾಸತ್ತೆ ಸುಧಾರಣೆ ಲೋಕಸತ್ತ ಮೂವ್ ಮೆಂಟ್ ಮತ್ತು ಫೌಂಡೇಶನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅಲ್ಲದೆ ಐಪಿಎಲ್ ಪಂದ್ಯವನ್ನು ಸ್ಥಳಾಂತರಿಸಬೇಕು ಎಂದು ಮನವಿ ಮಾಡಿತ್ತು.