ಮುಂಬೈ: ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಕ್ರಿಕೆಟಿಗ ಮಾಸ್ಚರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಕುರಿತಾದ ಚಿತ್ರ ಬೆಳ್ಳಿ ತೆರೆಮೇಲೆ ಬರುತ್ತಿದೆ ಎಂಬ ವಿಚಾರ ಹಳೆಯದೇ ಆದರೂ, ಹೊಸ ವಿಚಾರವೇನೆಂದರೆ ಈ ಚಿತ್ರದಲ್ಲಿ ಸಚಿನ್ ಪುತ್ರ ಅರ್ಜನ್ ತೆಂಡೂಲ್ಕರ್ ಅವರಿಗೆ ಯಾವುದೇ ಪಾತ್ರವಿಲ್ಲವಂತೆ.
ಸಚಿನ್ ಆತ್ಮಚರಿತೆ ಕುರಿತ ಕಥೆಯನ್ನು ಚಿತ್ರ ಮಾಡಲಾಗುತ್ತದೆ ಎಂಬ ವಿಚಾರ ಹರಿದಾಡಿದಾಗ ಚಿತ್ರದಲ್ಲಿ ಸಚಿನ್ ಅವರ ಬಾಲ್ಯದ ಪಾತ್ರವನ್ನು ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರೇ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಎಲ್ಲ ಊಹಾಪೋಹಗಳಿಗೆ ಇದೀಗ ತೆರೆ ಬಿದ್ದಿದ್ದು, ಅರ್ಜುನ್ ತೆಂಡೂಲ್ಕರ್ ಚಿತ್ರದ ಯಾವುದೇ ಭಾಗದಲ್ಲಿಯೂ ಕಾಣಿಸುವುದಿಲ್ಲವಂತೆ. ಇನ್ನೂ ಪ್ರಮುಖ ವಿಚಾರವೆಂದರೆ ಕೇವಲ ಅರ್ಜುನ್ ತೆಂಡೂಲ್ಕರ್ ಮಾತ್ರವಷ್ಟೇ ಅಲ್ಲ, ಬದಲಿಗೆ ಸಚಿನ್ ಕುರಿತ ಚಿತ್ರದಲ್ಲಿ ಅವರ ಕುಟುಂಬದ ಯಾವೊಬ್ಬ ಸದಸ್ಯರೂ ಕೂಡ ಕಾಣಿಸಿಕೊಳ್ಳುವುದಿಲ್ಲವಂತೆ.
ನಿರ್ದೇಶಕ ಜೇಮ್ಸ್ ಅರ್ಸ್ಕಿನ್ ಎಂಬುವವರು ಸಚಿನ್ ಕುರಿತ ಸಿನಿಮಾ "ಸಚಿನ್-ಎ ಬಿಲಿಯನ್ ಡ್ರೀಮ್ಸ್" ಚಿತ್ರವನ್ನು ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಎ ಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಚಿತ್ರವನ್ನು ರವಿ ಭಗತ್ ಚಂದ್ರ ಎಂಬ ನಿರ್ಮಾಪಕರು ನಿರ್ಮಾಣ ಮಾಡುತ್ತಿದ್ದು, ಈ ವರ್ಷದ ಅಂತ್ಯದಲ್ಲಿ ಅಂದರೆ ಡಿಸೆಂಬರ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.