ಮುಂಬೈ: ರೋಹಿತ್ ಶರ್ಮಾ ಅವರ ಅಮೋಘ ಅರ್ಧಶತಕ ಹಾಗೂ ಕೊನೆಯ ಹಂತದಲ್ಲಿ ಸಿಡಿದ ಕೀರನ್ ಪೊಲಾರ್ಡ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಬೆಂಗಳೂರು ರಾಯಲ್ ಚಾಲೆಂಜರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 6 ವಿಕೆಟ್ ಗಳ ಭರ್ಜರಿ ಜಯಸಾಧಿಸಿತು.
ಆರ್ ಸಿಬಿ ನೀಡಿದ 171ರನ್ ಗಳ ಸವಾಲಿನ ಗುರಿಯನ್ನು ಬೆನ್ನುಹತ್ತಿದ ಮುಂಬೈಗೆ ಆರಂಭಿಕ ಆಘಾತದ ನಡುವೆಯೂ ನಾಯಕ ರೋಹಿತ್ ಶರ್ಮಾ ಆಸರೆಯಾಗಿ ನಿಂತರು. ಅಂಬಾಟಿ ರಾಯುಡು ಜೊತೆಗೂಡಿದ ರೋಹಿತ್ ಭರ್ಜರಿ ಅರ್ಧಶತಕದ ಜೊತೆಯಾಟವಾಡಿ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತಿದರು. ಈ ನಡುವೆ ನಿಧಾನಗತಿಯ ಆರಂಭಕಂಡರೂ ಬಳಿಕ ಆಟಕ್ಕೆ ಕುದುರಿಕೊಂಡ ರೋಹಿತ್ ಶರ್ಮಾ ನೋಡ ನೋಡುತ್ತಿದ್ದಂತೆಯೇ ಭರ್ಜರಿ ಬೌಂಡರಿ ಹಾಗೂ ಸಿಕ್ಸರ್ ಗಳ ಮೂಲಕ ಅರ್ಧಶತಕ ಸಿಡಿಸಿದರು. ಒಟ್ಟು 44 ಎಸೆತಗಳನ್ನು ಎದುರಿಸಿದ ರೋಹಿತ್ ಬರೊಬ್ಬರಿ 62 ರನ್ ಸಿಡಿಸಿ ತಂಡವನ್ನು ಬಹುತೇಕ ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದ್ದರು. ಆದರೆ ಬಳಿಕ ಇಕ್ಬಾಲ್ ಅಬ್ದುಲ್ಲಾ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.
ಬಳಿಕ ಬಂದ ಜೋಸ್ ಬಟ್ಲರ್ (28 ರನ್) ಮತ್ತು ಕೀರನ್ ಪೊಲ್ಲಾರ್ಡ್ (ಅಜೇಯ 40 ರನ್) ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಮುಂಬೈ ತಂಡಕ್ಕೆ 6 ವಿಕೆಟ್ ಗಳ ಅಂತರದ ಭರ್ಜರಿ ಜಯತಂದಿತ್ತರು. ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 170 ರನ್ ಕಲೆಹಾಕಿತು. ನಾಯಕ ವಿರಾಟ್ ಕೊಹ್ಲಿಯೊಂದಿಗೆ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಆರ್ ಸಿಬಿ ಗೆ ಉತ್ತಮ ಆರಂಭ ನೀಡಿದರು. ವಿರಾಟ್ ಕೊಹ್ಲಿ 33 ರನ್ ಗಳಿಸಿದರೆ, ಟ್ರಾವಿಸ್ ಹೆಡ್ 37 ರನ್, ಎ.ಬಿ. ಡಿವಿಲಿಯರ್ಸ್ 29 ರನ್, ಸರ್ಫರಾಜ್ ಖಾನ್ 28 ರನ್ ಮತ್ತು ಲೋಕೇಶ್ ರಾಹುಲ್ 23 ರನ್ ಕಲೆಹಾಕುವ ಮೂಲಕ ಅರ್ ಸಿಬಿಯ ಸವಾಲಿನ ಮೊತ್ತಕ್ಕೆ ಕಾರಣರಾದರು.
ಮುಂಬೈ ಪರ ಬುಮ್ರಾಹ್ 3 ವಿಕೆಟ್ ಪಡೆದರೆ, ಪಾಂಡ್ಯಾ 2 ಮತ್ತು ಮೆಕ್ ಲೀನಿಘನ್ 1 ವಿಕೆಟ್ ಪಡೆದರು. ಸತತ ಸೋಲುಗಳಿಂದ ಕಂಗೆಟ್ಟಿದ್ದ ಮುಂಬೈಗೆ ಆರ್ ಸಿಬಿ ವಿರುದ್ಧದ ಈ ಪಂದ್ಯ ನಿರ್ಣಾಯಕವಾಗಿತ್ತು.
ಆಕರ್ಷಕ ಅರ್ಧ ಶತಕದ ಮೂಲಕ ಮುಂಬೈ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ನಾಯಕ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.