ಕ್ರಿಕೆಟ್

ಧೋನಿ ಬಗ್ಗೆ ಟ್ವೀಟ್ 'ಟೀಕೆ' ಮಾಡಿದ ಹರ್ಷಾ ಭೋಗ್ಲೆ

Rashmi Kasaragodu
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಕಾಮೆಂಟರಿ ಮಾಡಲು ಹರ್ಷಾ ಭೋಗ್ಲೆಗೆ ಅವಕಾಶ ಸಿಗದೇ ಇದ್ದರೂ, ಹರ್ಷಾ ಪ್ರಸ್ತುತ ಮ್ಯಾಚ್‌ನ ಪ್ರತಿಯೊಂದು ನಡೆಗಳನ್ನೂ ಕೂಲಂಕಷವಾಗಿ ಗಮನಿಸುತ್ತಿದ್ದಾರೆ.
ಐಪಿಎಲ್ ಆರಂಭವಾದಂದಿನಿಂದ ಇಂದಿನ ವರೆಗೆ ಹರ್ಷಾ ಪ್ರತೀ ಮ್ಯಾಚ್ ಬಗ್ಗೆ ಸಾಮಾಜಿಕ ತಾಣಗಳಲ್ಲಿ, ಸುದ್ದಿ ಪತ್ರಿಕೆಯ ಅಂಕಣದಲ್ಲಿ ಬರೆಯುತ್ತಿದ್ದಾರೆ. 
ಶುಕ್ರವಾರ ರೈಸಿಂಗ್ ಪುಣೆ ಸೂಪರ್‌ಜಯಿಂಟ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ 38 ಬಾಲ್ ಗಳಲ್ಲಿ 41 ರನ್ ಗಳಿಸಿ ಔಟಾದಾಗ ಹರ್ಷಾ ಧೋನಿ ವಿರುದ್ಧ ಟ್ವಿಟರ್‌ನಲ್ಲಿ ಟಾಂಗ್ ನೀಡಿದ್ದಾರೆ. 
180 ಪ್ಲಸ್  ರನ್‌ಗಳ ಗುರಿ ಮುಟ್ಟಬೇಕಿದೆ. 38 ಬಾಲ್ ಗಳಲ್ಲಿ 41 ರನ್ ನಿಮಗೆ ಗೆಲುವು ತಂದುಕೊಡುವುದಿಲ್ಲ. ಕೆಲವೊಂದು ದಿನಗಳಲ್ಲಿ ಇದು ಸಾಧ್ಯವಾಗಬಹುದು ಆದರೆ ಎಲ್ಲ ದಿನಗಳಲ್ಲಿ ಅಲ್ಲ ಎಂದು ಹರ್ಷಾ ಟ್ವೀಟ್ ಮಾಡಿದ್ದರು.
ಆದಾಗ್ಯೂ, ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಕಾಮೆಂಟೇಟರ್ ಆಗಿದ್ದ ಹರ್ಷಾ ಬಾಂಗ್ಲಾದೇಶವನ್ನೇ ಹೊಗಳಿ ಹುರಿದುಂಬಿಸುತ್ತಿದ್ದರು ಎಂಬ ಆಪಾದನೆ ಕೇಳಿ ಬಂದಿತ್ತು. 
ಅಮಿತಾಬ್ ಬಚ್ಚನ್ ಈ ಆಪಾದನೆ ಮಾಡಿದ್ದು, ಹರ್ಷಾ ಭೋಗ್ಲೆಯವರೇ ಆ ರೀತಿ ಮಾತನಾಡಿದ್ದಾರೆ ಎಂದು ಸ್ಪಷ್ಟವಾಗಿ ಬಚ್ಚನ್ ಹೇಳದೇ ಇದ್ದರೂ, ಅದು ಹರ್ಷಾ  ಅವರ ಬಗ್ಗೆಯೇ ಹೇಳಿದ್ದು ಎಂಬುದು ಅವರ ಟ್ವೀಟ್ ನಿಂದ ಅರ್ಥವಾಗುತ್ತಿತ್ತು.
ಬಚ್ಚನ್ ಅವರ ಟ್ವೀಟ್‌ನ್ನು ಮಹೇಂದ್ರ ಸಿಂಗ್ ಧೋನಿ ರೀಟ್ವೀಟ್ ಮಾಡಿದ್ದು, ಬಾಂಗ್ಲಾದೇಶವನ್ನು ಹೊಗಳಿದ್ದಾರೆ ಎಂಬ ತಪ್ಪಿಗೆ ಹರ್ಷಾ ಅವರನ್ನು ಐಪಿಎಲ್ ಕಾಮೆಂಟರಿ ಟೀಂನಿಂದ ಕೈಬಿಡಲಾಗಿತ್ತು . 
ಏತನ್ಮಧ್ಯೆ, ಹರ್ಷಾ  ಅವರನ್ನು ಕೈ ಬಿಟ್ಟಿರುವುದಕ್ಕೆ ಬಿಸಿಸಿಐ ಕಾರಣವನ್ನು ನೀಡದೇ ಇದ್ದರೂ, ಬಚ್ಚನ್ ಅವರ 'ದೇಶಪ್ರೇಮ'ದ ಟ್ವೀಟ್ ಇದಕ್ಕೆಲ್ಲವೂ ಕಾರಣ ಎಂಬುದು ಸ್ಪಷ್ಟ. ಅಷ್ಟೇ ಅಲ್ಲದೆ ಧೋನಿ ಕೂಡಾ ಹರ್ಷಾ ಬಗ್ಗೆ ಅಸಮಾಧಾನ ಹೊಂದಿರುವುದು ಕೂಡಾ ಕಾಮೆಂಟರಿ ಸ್ಥಾನ ನಷ್ಟವಾಗಲು ಕಾರಣ ಎಂದು ಹೇಳಲಾಗುತ್ತಿದೆ.
SCROLL FOR NEXT