ಪೋರ್ಟ್ ಆಫ್ ಸ್ಪೇನ್: ವಿಂಡೀಸ್ ಪ್ರವಾಸದಲ್ಲಿ ಮಳೆಯಾಟದ ನಡುವೆಯೂ ಭಾರತ 2-0 ಅಂತರದಲ್ಲಿ ಟೆಸ್ಟ್ ಸರಣಿ ಜಯಿಸಿದ್ದು, ಸರಣಿ ಜಯದಲ್ಲಿ ಭಾರತದ ಆಲ್ ರೌಂಡರ್ ಆರ್ ಅಶ್ವಿನ್ ಹಾಗೂ ವೃದ್ದಿಮಾನ್ ಸಹಾ ಅವರನ್ನು ನಾಯಕ ವಿರಾಟ್ ಕೊಹ್ವಿ ಕೊಂಡಾಡಿದ್ದಾರೆ.
ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯ ಪ್ರಮುಖ ಅಸ್ತ್ರವಾಗಿದ್ದ ಆರ್ ಅಶ್ವಿನ್ ರನ್ನು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮನಃಪೂರ್ವಕವಾಗಿ ಕೊಂಡಾಡಿದ್ದಾರೆ. ಆದರೆ ವಿರಾಟ್ ಕೊಹ್ಲಿ ಅಶ್ವಿನ್ ರನ್ನು ಹೊಗಳಿರುವುದು ಬೌಲಿಂಗ್ ನಿಂದಾಗಿ ಅಲ್ಲ. ಬದಲಿಗೆ ಅವರ ಬ್ಯಾಟಿಂಗ್ ಪ್ರದರ್ಶನಕ್ಕಾಗಿ. ಹೌದು.. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತದ ಸ್ಪಿನ್ ಅಸ್ತ್ರ ಕೇವಲ ಬೌಲಿಂಗ್ ಮಾತ್ರವಲ್ಲದೇ ಬ್ಯಾಟಿಂಗ್ ನಲ್ಲೂ ಮಿಂಚಿದ್ದಾರೆ. ಅವರ ಈ ಬ್ಯಾಟಿಂಗ್ ಬೆಂಬಲದಿಂದಾಗಿ ಭಾರತ ವಿಂಡೀಸ್ ವಿರುದ್ಧ ಸಾಕಷ್ಚು ರನ್ ಗಳನ್ನು ಕಲೆಹಾಕಿತ್ತು.
ಆ್ಯಂಟಿಗುವಾ ಮತ್ತು ಸೆಂಟ್ ಲೂಸಿಯಾದಲ್ಲಿ ನಡೆದ ಪಂದ್ಯಗಳಲ್ಲಿ ಅಶ್ವಿನ್ ಸಿಡಿಸಿದ್ದ ಶತಕಗಳಿಂದಾಗಿ ತಾನೊಬ್ಬ ಸ್ಪಿನ್ನರ್ ಮಾತ್ರವಲ್ಲದೇ ಉತ್ತಮ ಬ್ಯಾಟ್ಸಮನ್ ಎಂದು ಸಾಬೀತು ಪಡಿಸಿದ್ದರು. ಇದೇ ಕಾರಣಕ್ಕೆ ನಾಯಕ ಕೊಹ್ಲಿ ಅಶ್ವಿನ್ ಗೆ 9 ಕ್ರಮಾಂಕದಿಂದ 6ನೇ ಕ್ರಮಾಂಕಕ್ಕೆ ಬಡ್ತಿ ನೀಡಿದ್ದಾರೆ. ವೃದ್ಧಿಮಾನ್ ಸಹಾ ಕೂಡ ಮೊದಲೆರಡು ಪಂದ್ಯಗಳಲ್ಲಿ 40 ರನ್ ಗಳ ಕಾಣಿಕೆ ನೀಡಿ ಮೂರನೇ ಪಂದ್ಯದಲ್ಲಿ ಆಕರ್ಷಕ ಶತಕ ಗಳಿಸಿದ್ದರು. ಇದು ನಾಯಕ ಕೊಹ್ಲಿ ಅವರ ಶ್ಲಾಘನೆಗೆ ಕಾರಣವಾಗಿದೆ.
ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ಅಶ್ವಿನ್ ಮತ್ತು ಸಹಾ ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವುದು ತಂಡದ ಭವಿಷ್ಯದ ಮಟ್ಟಿಗೆ ತುಂಬಾ ಒಳ್ಳೆಯ ಬೆಳವಣಿಗೆಯಾಗಿದೆ. ಅಶ್ವಿನ್ ಮತ್ತು ಸಹಾ ಅವರು ಶತಕ ಸಿಡಿಸಿ ಬ್ಯಾಟಿಂಗ್ ನಲ್ಲಿ ತಮ್ಮ ಸಾಮರ್ಥ್ಯ ತೋರಿದ್ದಾರೆ. ಹೀಗಾಗಿ ಅಶ್ವಿನ್ ಗೆ 9ರಿಂದ 6ನೇ ಕ್ರಮಾಂಕಕ್ಕೆ ಬಡ್ತಿ ನೀಡಲಾಗಿದೆ. ಇದಕ್ಕೆ ಅಶ್ವಿನ್ ನಿಜಕ್ಕೂ ಅರ್ಹರು ಕೂಡ. ಇನ್ನು ಈ ಹಿಂದೆ ನಾವು ಸಮಸ್ಯೆ ಎದುರಿಸುತ್ತಿದ್ದ ಸಾಕಷ್ಟು ವಿಭಾಗಗಳಲ್ಲಿ ನಾವು ವಿಂಡೀಸ್ ನಲ್ಲಿ ಉತ್ತಮ ನಿರ್ವಹಣೆ ತೋರಿದ್ದೇವೆ. ಇದರ ಹೊರತಾಗಿಯೂ ಇನ್ನೂ ಸಾಕಷ್ಟು ವಿಭಾಗದಲ್ಲಿ ಸುಧಾರಿಸಬೇಕಿದೆ ಎಂದು ಕೊಹ್ಲಿ ಹೇಳಿದ್ದಾರೆ.
"2015ರಲ್ಲಿ ನಡೆದ ಗಾಲೆ ಟೆಸ್ಟ್ ನಲ್ಲಿ ನಾವು ಬ್ಯಾಟ್ಸಮನ್ ಗಳ ಕೊರತೆಯಿಂದಾಗಿ ಸೋತಿದ್ದೆವು. ಅದೇ ಪರಿಸ್ಥಿತಿ ದಕ್ಷಿಣ ಆಫ್ರಿಕಾದಲ್ಲೂ ಮುಂದುವರೆದಿತ್ತು. ಹೀಗಾಗಿ ಹೆಚ್ಚುವರಿ ಬ್ಯಾಟ್ಸಮನ್ ಗಾಗಿ ನಾವು ವಿಂಡೀಸ್ ಸರಣಿಯಲ್ಲಿ ಒಂದಿಷ್ಟು ಪ್ರಯೋಗ ನಡೆಸಿದ್ದವು. ಅದು ನಿರೀಕ್ಷಿತ ಫಲಿತಾಂಶ ಕೊಟ್ಟಿದ್ದು, ಅಶ್ವಿನ್ ಮತ್ತು ವೃದ್ದಿಮಾನ್ ಸಹಾ ಜೋಡಿ ಕೆಳಕ್ರಮಾಂಕದಲ್ಲಿ ಯಶಸ್ವಿಯಾಗಿದೆ. ಆ ಮೂಲಕ ತಂಡದಲ್ಲಿ ಹೆಚ್ಚುವರಿ ಬ್ಯಾಟ್ಸಮನ್ ಗಳು ಸೇರ್ಪಡೆಯಾಗಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ.