ಹರಾರೆ: ಟಿ20 ವಿಶ್ವಕಪ್ ಸೋಲು ಮತ್ತು ಐಪಿಎಲ್ ಸೋಲಿನಿಂದ ಕಂಗೆಟ್ಟಿರುವ ಭಾರತ ಏಕದಿನ ಮತ್ತು ಟಿ20 ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಜಿಂಬಾಬ್ವೆ ಪ್ರವಾಸ ಪ್ರಮುಖವಾಗಿದ್ದು, ಧೋನಿ ನಾಯಕತ್ವ ಉಳಿಸಿಕೊಳ್ಳುವಲ್ಲಿ ಈ ಪ್ರವಾಸ ನಿರ್ಣಾಯಕವಾಗಲಿದೆ.
ಕಳೆದ ಕೆಲ ಪ್ರಮುಖ ಸರಣಿಗಳ ಸೋಲಿನಿಂದ ತೀವ್ರ ಟೀಕೆಗೆ ಗುರಿಯಾಗಿರುವ ಧೋನಿ ಪಾಲಿಗೆ ಇದು ಪ್ರಮುಖ ಸರಣಿಯೇ ಆಗಿದೆ. ಸಾಕಷ್ಟು ಯುವ ಆಟಗಾರರಿದ್ದರೂ ಭಾರತ ಫೆವರಿಟ್ ತಂಡವಾಗಿಯೇ ಸರಣಿ ಆರಂಭಿಸಲಿದ್ದು, ಜಿಂಬಾಬ್ವೆ ಸುಲಭ ತುತ್ತಾಗುವ ನಿರೀಕ್ಷೆ ಹರಡಿದೆ. ಆದರೆ ಒಂದು ವೇಳೆ ಧೋನಿ ಗ್ರಹಚಾರ ಕೆಟ್ಟು ಇದು ಉಲ್ಟಾ ಹೊಡೆದರೆ ಅವರ ನಾಯಕತ್ವಕ್ಕೆ ತೆರೆಬಿದ್ದಂತೆಯೇ ಸರಿ. ಏಕೆಂದರೆ ಮೂಲಗಳ ಪ್ರಕಾರ ಜಿಂಬಾಂಬ್ವೆ ಪ್ರವಾಸದ ಬಳಿಕ ವಿರಾಟ್ ಕೊಹ್ಲಿ ಅವರನ್ನು ಎಲ್ಲ ಮಾದರಿ ತಂಡಕ್ಕೆ ನಾಯಕರನ್ನಾಗಿ ನೇಮಿಸಲು ಬಿಸಿಸಿಐನ ಕೆಲ ಸದಸ್ಯ ಆಸ್ತಕ್ತಿ ಹೊಂದಿದ್ದು, ಜಿಂಬಾಂಬ್ವೆ ಪ್ರವಾಸದಲ್ಲಿ ಧೋನಿ ಇಡುವ ಒಂದೇ ಒಂದು ಕೆಟ್ಟ ನಡೆ ಕೂಡ ಅವರ ನಾಯಕತ್ವಕ್ಕೆ ಕುತ್ತಾಗುವ ಸಾಧ್ಯತೆ ಇದೆ.
ಈಗಾಗಲೇ ಧೋನಿ ನೇತೃತ್ವದ ಟೀಂ ಇಂಡಿಯಾ ಟಿ20 ವಿಶ್ವಕಪ್ ನಲ್ಲಿ ಸೋಲು ಕಂಡಿದ್ದು, ಬಳಿಕ ನಡೆದ ಐಪಿಎಲ್ ನಲ್ಲೂ ಕೂಡ ಧೋನಿ ನೇತೃತ್ವದ ಪುಣೆ ತಂಡ ನೀರಸ ಪ್ರದರ್ಶನ ನೀಡಿತ್ತು. ಇನ್ನು ಮತ್ತೊಂದು ತುದಿಯಲ್ಲಿ ಉಪನಾಯಕ ವಿರಾಟ್ ಕೊಹ್ಲಿಗೆ ಭಾರತ ತಂಡದ ನಾಯಕತ್ವ ವಹಿಸುವ ಕುರಿತು ಚರ್ಚೆಗಳು ಆರಂಭವಾಗಿದ್ದು, ಒಂದು ವೇಳೆ ಧೋನಿ ಜಿಂಬಾಬ್ವೆ ಪ್ರವಾಸದಲ್ಲಿ ವಿಫಲರಾದರೆ ಖಂಡಿತಾ ಧೋನಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಲು ಬಿಸಿಸಿಐ ಚಿಂತನೆ ನಡೆಸುತ್ತದೆ ಎಂದು ಹೇಳಲಾಗುತ್ತಿದೆ.
ಮುಂಬರುವ ತವರಿನ ಸರಣಿಗಳ ಯಶಸ್ಸನ್ನು ಕಂಡು ಆಯ್ಕೆಗಾರರು ಟೆಸ್ಟ್ ನಾಯಕ ವಿರಾಟ್ ಕೊಹ್ಲಿಗೇ ಸೀಮಿತ ಓವರ್ ನಾಯಕತ್ವವನ್ನೂ ಒಪ್ಪಿಸಲು ಮುಂದಾದರೆ ಇದು ಧೋನಿ ನಾಯಕತ್ವದ ಕೊನೇ ಸರಣಿ ಆಗಲಿದೆ.