ಕ್ರಿಕೆಟ್

ಪದಾರ್ಪಣೆ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ ಕನ್ನಡಿಗ ರಾಹುಲ್

Srinivasamurthy VN

ಹರಾರೆ: ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತ ಕ್ರಿಕೆಟ್ ತಂಡದ ದಾಖಲೆ ಪಟ್ಟಿ ಮುಂದುವರೆದಿದ್ದು, ಇದೀಗ ಪಟ್ಟಿಗೆ ಕನ್ನಡಿಗ ಕೆಎಲ್ ರಾಹುಲ್ ಹೆಸರು ಸೇರ್ಪಡೆಯಾಗಿದೆ.

ಹರಾರೆಯಲ್ಲಿ ನಿನ್ನೆ ಜಿಂಬಾಬ್ವೆ ವಿರುದ್ಧ ಆರಂಭವಾದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಕನ್ನಡಿಗ ಕೆಎಲ್ ರಾಹುಲ್ ತಮ್ಮ  ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಒಟ್ಟು 115 ಎಸೆತಗಳನ್ನು ಎದುರಿಸಿದ ರಾಹುಲ್ ಒಂದು ಸಿಕ್ಸರ್ ಹಾಗೂ 7 ಬೌಂಡರಿ ಗಳ ನೆರವಿನಿಂದ ಅಮೋಘ  ಶತಕ ಸಿಡಿಸಿದ್ದಾರೆ.

ಆ ಮೂಲಕ ಪದಾರ್ಪಣೆ ಪಂದ್ಯದಲ್ಲಿಯೇ ಶತಕ ಸಿಡಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಕೀರ್ತಿಗೆ ರಾಹುಲ್ ಭಾಜನರಾಗಿದ್ದಾರೆ. ಇದಕ್ಕೂ ಮೊದಲು ಕರ್ನಾಟಕದವರೇ ಆದ ರಾಬಿನ್  ಉತ್ತಪ್ಪ 2006ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪದಾರ್ಪಣೆ ಮಾಡಿ ಭರ್ಜರಿ 86 ರನ್ ಗಳಿಸಿದ್ದರು. ಇದು ಭಾರತೀಯ ಕ್ರಿಕೆಟಿಗರ ಪೈಕಿ ಪದಾರ್ಪಣೆ ಪಂದ್ಯದಲ್ಲಿ ಸಿಡಿಸಿದ ಅತ್ಯಂತ ಗರಿಷ್ಠ  ರನ್ ಗಳಿಕೆ ಸಾಧನೆಯಾಗಿತ್ತು. ಆದರೆ ನಿನ್ನೆ ಕೆಎಲ್ ರಾಹುಲ್ ಈ ಸಾಧೆನೆಯನ್ನು ಮುರಿದಿದ್ದು, ಮಾತ್ರವಲ್ಲದೇ ಶತಕ ಸಿಡಿಸುವ ಮೂಲಕ ಪಾದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿದ ಭಾರತದ  ಮೊದಲ ಮತ್ತು ವಿಶ್ವದ 11ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

1972ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಡೆನ್ನಿಸ್ ಅಮಿಸ್ ತಮ್ಮ ಪಾದಾರ್ಪಣೆ ಪಂದ್ಯದಲ್ಲಿಯೇ ಶತಕ ಸಿಡಿಸಿ ಈ ಸಾಧನೆಗೈದ ವಿಶ್ವದ ಮತ್ತು ಇಂಗ್ಲೆಂಡ್ ನ ಮೊದಲ  ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದರು. ಆ ಬಳಿಕ 1978ರಲ್ಲಿ ವೆಸ್ಟ್ ಇಂಡೀಸ್ ತಂಡ ಡೆಸ್ಮಾಂಡ್ ಹೇನ್ಸ್, 1992ರಲ್ಲಿ ಜಿಂಬಾಬ್ವೆ ತಂಡದ ಆ್ಯಂಡಿ ಫ್ಲವರ್, 1995ರಲ್ಲಿ ಪಾಕಿಸ್ತಾನದ ಸಲೀಂ  ಇಲಾಹಿ, 2009ರಲ್ಲಿ ಕಿವೀಸ್ ತಂಡದ ಮಾರ್ಟಿನ್ ಗಪ್ಟಿಲ್, 2010ರಲ್ಲಿ ದಕ್ಷಿಣ ಆಫ್ರಿಕಾ ತಂಡದ ಕೊಲಿನ್ ಇನ್ ಗ್ರಾಂ, 2011ರಲ್ಲಿ ಕಿವೀಸ್ ಪಡೆಯ ರಾಬ್ ನಿಕೋಲ್, 2013ರಲ್ಲಿ ಆಸಿಸ್ ನ ಫಿಲಿಪ್  ಹ್ಯೂಸ್, 2014ರಲ್ಲಿ ಇಂಗ್ಲೆಂಡ್ ನ ಮೈಕೆಲ್ ಲಾಂಬ್, 2015ರಲ್ಲಿ ಹಾಂಗ್ ಕಾಂಗ್ ತಂಡದ ಮಾರ್ಕ್ ಚಾಪ್ಮನ್ ತಮ್ಮ ಪದಾರ್ಪಣೆ ಪಂದ್ಯದಲ್ಲಿಯೇ ಶತಕ ಸಿಡಿಸಿದ್ದರು.

ಇದೀಗ 2016ರಲ್ಲಿ ಭಾರತದ ಕೆಎಲ್ ರಾಹುಲ್ ಈ ಸಾಧನೆ ಗೈದ 11 ಆಟಗಾರರಾಗಿದ್ದಾರೆ.

SCROLL FOR NEXT