ನವದೆಹಲಿ: ಟೀಂ ಇಂಡಿಯಾದ ಮುಂದಿನ ಹೆಡ್ ಕೋಚ್ ಆಯ್ಕೆ ಪ್ರಕ್ರಿಯೆ ಸಂಬಂಧ ಕ್ರಿಕೆಟರುಗಳಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಅವರನ್ನು ಒಳಗೊಂಡ ಸಮಿತಿ ರಚನೆಯಾಗಿದೆ.
ಬಿಸಿಸಿಐ ಮಾಜಿ ಕಾರ್ಯದರ್ಶಿ ಮತ್ತು ಕ್ರಿಕೆಟರ್ ಸಂಜಯ್ ಜಗದಾಲೆ ಈ ಸಮಿತಿಯ ಮುಖ್ಯ ಸಮನ್ವಯಕರಾಗಿದ್ದಾರೆ. ಟೀಂ ಇಂಡಿಯಾ ಹೆಡ್ ಕೋಚ್ ಹುದ್ದೆಗೆ 57 ಅರ್ಜಿದಾರರ ಪೈಕಿ 21 ಅಭ್ಯರ್ಥಿಗಳನ್ನು ಬಿಸಿಸಿಐ ಪಟ್ಟಿ ಮಾಡಿದೆ.
ಈ 21 ಮಂದಿ ಬಿಸಿಸಿಐ ಅರ್ಹತೆ ಮಾನದಂಡವನ್ನು ಪೂರೈಸಿದ್ದಾರೆ. ತೆಂಡೂಲ್ಕರ್, ಗಂಗೂಲಿ ಮತ್ತು ಲಕ್ಷ್ಮಣ್ ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ಅವರಿಗೆ ಜೂನ್ 22ರಂದು ವರದಿ ಸಲ್ಲಿಸಲಿದ್ದಾರೆ. ಮಂಡಳಿಯು ಕಾರ್ಯಕಾರಿ ಸಮಿತಿಯ ಸಭೆಯ ಬಳಿಕ ತನ್ನ ಪ್ರಕಟಣೆಯನ್ನು ನೀಡುವ ನಿರೀಕ್ಷೆಯಿದೆ.
ಜುಲೈ-ಆಗಸ್ಟ್‌ನಲ್ಲಿ ನಡೆಯುವ ವೆಸ್ಟ್ ಇಂಡೀಸ್ ವಿರುದ್ಧ ಸರಣಿಯಲ್ಲಿ ಹೊಸ ಕೋಚ್ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಈ ಮಧ್ಯೆ, ಸಂಜಯ್ ಬಂಗಾರ್ ಜಿಂಬಾಬ್ವೆಯಲ್ಲಿ ಪ್ರಸಕ್ತ ಏಕದಿನ ಸರಣಿಗೆ ಪರ್ಯಾಯ ಕೋಚ್ ಆಗಿದ್ದಾರೆ.
ಉನ್ನತ ಹುದ್ದೆಗೆ ಅತೀ ಗಣ್ಯ ಅಭ್ಯರ್ಥಿಗಳಿದ್ದು, ಮಾಜಿ ಟೀಂ ಡೈರೆಕ್ಟರ್ ರವಿ ಶಾಸ್ತ್ರಿ ಇನ್ನೊಂದು ಅವಧಿಗಾಗಿ ಎದುರುನೋಡುತ್ತಿದ್ದು, ಸಂದೀಪ್ ಪಾಟೀಲ್ ಮತ್ತು ಅನಿಲ್ ಕುಂಬ್ಳೆಯಿಂದ ಪೈಪೋಟಿ ನೀಡುತ್ತಿದ್ದಾರೆ.