ಹರಾರೆ: ಭಾರತೀಯ ಕ್ರಿಕೆಟ್ ಗೆ ಕಳಂಕ ಹಚ್ಚಿದ್ದ ಹರಾರೆ ಅತ್ಯಾಚಾರ ಪ್ರಕರಣದಲ್ಲಿ ಬೆಂಗಳೂರು ಮೂಲದ ವ್ಯಕ್ತಿಯ ಕೈವಾಡವಿದೆ ಎಂದು ಹೇಳಲಾಗುತ್ತಿದೆ.
ಭಾರತ ಮತ್ತು ಜಿಂಬಾಬ್ವೆ ದೇಶಗಳು ಮಾತ್ರವಲ್ಲದೇ ಇಡೀ ಕ್ರಿಕೆಟ್ ಜಗತ್ತಿನಲ್ಲಿ ವ್ಯಾಪಕ ಚರ್ಚೆಗೀಡಾಗಿದ್ದ ಅತ್ಯಾಚಾರ ಪ್ರಕರಣದ ಬೇರುಗಳು ಸಿಲಿಕಾನ್ ಸಿಟಿ ಬೆಂಗಳೂರಿಗೂ ತಲುಪಿದ್ದು, ಮಹಿಳೆ ಮೇಲೆ ಅತ್ಯಾಚಾರ ಗೈದ ಆರೋಪಿಗಳ ಪೈಕಿ ಓರ್ವ ಆರೋಪಿ ಬೆಂಗಳೂರು ಮೂಲದ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಅತ್ಯಾಚಾರ ಪ್ರಕರಣದ ಪೈಕಿ ಬಂಧಿತರಾಗಿರುವ ಭಾರತೀಯ ಮೂಲದ ಇಬ್ಬರು ವ್ಯಕ್ತಿಗಳ ಪೈಕಿ ಓರ್ವ ಬೆಂಗಳೂರು ಮೂಲದ ಸಂಸ್ಥೆಯ ಉದ್ಯೋಗಿಯಾಗಿ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಬಂಧಿತನಾಗಿರುವ ಕೃಷ್ಣ ಸತ್ಯನಾರಾಯಣ್ ಸರಣಿ ಪ್ರಾಯೋಜಕತ್ವ ಸಂಸ್ಥೆಯ ಭಾಗವಾಗಿರುವ ಬೆ೦ಗಳೂರು ಮೂಲದ ಕ೦ಪನಿ "ಐ ಟೀಮ್ ವಕ್ಸ್‍೯' (ಐಟಿಡಬಲ್ಯೂ) ಸ್ಪೋಟ್ಸ್‍೯ ಮ್ಯಾನೇಜ್‍ಮೆ೦ಟ್‍ನ ಉದ್ಯೋಗಿ ಎಂದು ತಿಳಿದುಬಂದಿದೆ. ಮತ್ತೋರ್ವ ಆರೋಪಿ ರಾಜ್‍ಕುಮಾರ್ ಕೃಷ್ಣನ್ ಭಾರತ ಮೂಲದ ಕೀನ್ಯಾ ಉದ್ಯಮಿ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇನ್ನು ಈ ಬೆಳವಣಿಗೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ "ಐ ಟೀಮ್ ವಕ್ಸ್‍೯' ಸಂಸ್ಥೆ, ಪ್ರಕರಣದ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದೆ. ಅಲ್ಲದೆ ಆರೋಪದ ಸತ್ಯಾಸತ್ಯತೆ ತಿಳಿಯಲು ನಾವೂ ಕೂಡ ಪ್ರಯತ್ನಿಸುತ್ತಿದ್ದೇವೆ ಎ೦ದು ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಸ್ತುತ ಜಿಂಬಾಬ್ವೆ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಉಳಿದುಕೊಂಡಿರುವ ಹರಾರೆಯ ಮ್ಯೆಕ್ಲೆಸ್ ಹೋಟೆಲ್‍ನಲ್ಲೇ ಈ ಇಬ್ಬರು ಆರೋಪಿಗಳು ಉಳಿದುಕೊಂಡಿದ್ದು, ಸ್ಥಳೀಯ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದರು ಎಂಬ ಆರೋಪ ಇವರ ಮೇಲಿದೆ. ಆದರೆ ಜಿಂಬಾಬ್ವೆ ಮಾಧ್ಯಮಗಳು ಪ್ರಕರಣದ ಸತ್ಯಾಸತ್ಯತೆ ತಿಳಿಯದೇ ಅದೇ ಹೊಟೆಲ್ ನಲ್ಲಿದ್ದ ಭಾರತೀಯ ಕ್ರಿಕೆಟಿಗರೇ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಸುದ್ದಿ ಬಿತ್ತರಿಸುವ ಮೂಲಕ ಭಾರತ ಕ್ರಿಕೆಟ್ ತಂಡ ತೀವ್ರ ಮುಜುಗರಕ್ಕೀಡಾಗುವಂತೆ ಮಾಡಿದ್ದವು.ಟ
ಆದರೆ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿದ ಕೇಂದ್ರ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಜಿಂಬಾಬ್ವೆ ರಿಪಬ್ಲಿಕನ್ ಪೊಲೀಸರಿಂದ ನಿಖರ ಮಾಹಿತಿ ಪಡೆದು, ಆಟಗಾರರಿಗೂ ಅತ್ಯಾಚಾರ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ಬಿಸಿಸಿಐ ಕೂಡ ಈ ಆರೋಪಗಳನ್ನು ತಳ್ಳಿ ಹಾಕಿತ್ತು. ಇದೀಗ ಬಿಸಿಸಿಐ ಸರಣಿ ಪ್ರಾಯೋಜಕತ್ವ ಸಂಸ್ಥೆ ಮೇಲೆ ತೀವ್ರ ಒತ್ತಡ ಹಾಕಿದ್ದರಿಂದ ಐ ಟೀಮ್ ವರ್ಕ್ಸ್ ಸಂಸ್ಥೆ ಪ್ರಕರಣ ಸಂಬಂಧ ತನ್ನ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.