ಮುಂಬೈ: ಮಾಜಿ ನಾಯಕ ಹಾಗೂ ಹಾಲಿ ಐಸಿಸಿ ಕ್ರಿಕೆಟ್ ಸಮಿತಿ ಅಧ್ಯಕ್ಷ ಕರ್ನಾಟಕದ ಅನಿಲ್ ಕುಂಬ್ಳೆ ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ನೇಮಕಗೊಂಡಿದ್ದಾರೆ. ಈ ಮೂಲಕ ಕಳೆದ ಕೆಲವು ತಿಂಗಳುಗಳಿಂದ ಇದ್ದ ಕೋಚ್ ನೇಮಕದ ಕುತೂಹಲಕ್ಕೆ ಬಿಸಿಸಿಐ ತೆರೆ ಎಳೆದಿದೆ.
ಇನ್ನೂ ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಆಗಿ ಆಯ್ಕೆಯಾಗಿರುವುದಕ್ಕೆ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಕುಂಬ್ಳೆ ಸರ್ಗೆ ಹೃದಯಪೂರ್ವಕವಾಗಿ ತಂಡಕ್ಕೆ ಸ್ವಾಗತ ಕೋರುತ್ತಿದ್ದೇನೆ. ನಿಮ್ಮೊಂದಿಗೆ ಕಾರ್ಯನಿರ್ವಹಿಸಲು ಕಾತರದಲ್ಲಿದ್ದೇನೆ. ನಿಮ್ಮೊಂದಿಗೆ ಭಾರತೀಯ ಕ್ರಿಕೆಟ್ನ ಹೆಮ್ಮೆಯ ಕ್ಷಣಗಳನ್ನು ದಾಖಲಿಸುವ ನಂಬಿಕೆ ಇದೆ. ಪ್ರಸಿದ್ದ ಲೆಗ್ ಸ್ಪಿನ್ನರ್ ಅಗಿರುವ ಕುಂಬ್ಳೆ ಜೊತೆ ಕೆಲಸ ಮಾಡುವ ಅದೃಷ್ಟ ನವ್ಮದು ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
ಕುಂಬ್ಳೆ ಭಾರತ ತಂಡದ ನಾಯಕನಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಹೀಗಾಗಿ ಕೋಚ್ ಆಗಿಯೂ ನಿರ್ಧಾರಗಳನ್ನು ಕೈಗೊಳ್ಳಲು ಅವರಿಗೆ ಇದು ನೆರವಾಗಲಿದೆ. ಆಟದ ಬಗ್ಗೆ ಅವರಿಗಿರುವ ಉತ್ತಮ ಜ್ಞಾನವನ್ನು ಆಟಗಾರರೊಂದಿಗೆ ಹಂಚಿಕೊಳ್ಳಬಹುದು ಎಂದು ಹೇಳಿದ್ದಾರೆ.
ಕೋಚ್ ರೇಸ್ನಲ್ಲಿ ಟೀಮ್ ಇಂಡಿಯಾ ಮಾಜಿ ಡೈರೆಕ್ಟರ್, ಕ್ರಿಕೆಟ್ ವಿಶ್ಲೇಷಕ ರವಿಶಾಸ್ತ್ರಿ, ಆಸ್ಟ್ರೇಲಿಯಾದ ಟಾಮ್ ಮೂಡಿ, ಸ್ಟುವರ್ಟ್ ಲಾ ಸೇರಿದಂತೆ ಹಲವು ಖ್ಯಾತನಾಮರನ್ನು ಮಣಿಸಿ ಅನಿಲ್ ಕುಂಬ್ಳೆ ಆಯ್ಕೆಯಾಗಿದ್ದಾರೆ.