ನಾಗ್ಪುರ: 2016 ನೇ ಸಾಲಿನ ಟಿ20 ವಿಶ್ವಕಪ್ ಗಾಗಿ ವಿಶ್ವದ 10 ಪ್ರಬಲ ತಂಡಗಳು ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಮಂಗಳವಾರದಿಂದ ಪ್ರಧಾನ ಸುತ್ತಿನ ಪಂದ್ಯಗಳು ಆರಂಭವಾಗಲಿವೆ.
ಏಷ್ಯಾಕಪ್ ಟೂರ್ನಿಯ ಯಶಸ್ಸಿನ ಬಳಿಕ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಭಾರತ ತಂಡ ಸರಣಿ ಗೆಲ್ಲುವ ಫೇವರಿಟ್ ತಂಡ ಕೂಡ ಹೌದು. ಕಳೆದ 15 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅಜೇಯ ದಾಖಲೆ ಹೊಂದಿರುವ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಈ ಮೂರು ವಿಭಾಗಗಳಲ್ಲಿಯೂ ಸಮತೋಲಿತವಾಗಿದೆ. ಹೀಗಾಗಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಚ್ಚು ತ್ರಾಸ ಪಡುವ ಅಗತ್ಯವಿಲ್ಲ.
ಆದರೆ ಈ ಹಿಂದೆ ಮುಂಬೈನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಕೇವಲ 4 ರನ್ ಗಳ ಅಂತರದಲ್ಲಿ ಸೋತಿತ್ತು. ಭಾರತದ ಬ್ಯಾಟಿಂಗ್ ಸಾಮರ್ಥ್ಯ ಎಲ್ಲರಿಗೂ ತಿಳಿದಿದೆಯಾದರೂ ಬೌಲಿಂಗ್ ನಲ್ಲಿ ಮತ್ತಷ್ಟು ಸುಧಾರಣೆ ಅಗತ್ಯವಿದೆ. ಹೀಗಾಗಿ ಕಠಿಣ ಅಭ್ಯಾಸ ಮತ್ತು ಆಟಗಾರರು ಸಂಪೂರ್ಣ ಸಾಮರ್ಥ್ಯದಿಂದ ಆಡದ ಹೊರತು ಟಿ20 ವಿಶ್ವಕಪ್ ಭಾರತದ ಪಾಲಾಗುವುದು ಅನುಮಾನ. ಇನ್ನು ಭಾರತದೊಂದಿಗೆ ಫೇವರಿಟ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಅಭ್ಯಾಸ ಪಂದ್ಯಗಳಲ್ಲಿ ಈಗಾಗಲೇ ತಮ್ಮ ಸಾಮರ್ಥ್ಯ ತೋರಿದ್ದು, ಭಾರತಕ್ಕೆ ಕಠಿಣವಾಗುವ ಮುನ್ಸೂಚನೆ ನೀಡಿವೆ.
ಉಳಿದಂತೆ ಏಷ್ಯಾಕಪ್ ನಲ್ಲಿ ತೀವ್ರ ನಿರಾಸೆ ಅನುಭವಿಸಿರುವ ಪಾಕಿಸ್ತಾನ ಮತ್ತು ಹಾಲಿ ಚಾಂಪಿಯನ್ ಶ್ರೀಲಂಕಾ ತಂಡಗಳು ತಿರುಗಿ ಬೀಳಿವು ತವಕದಲ್ಲಿದ್ದು, ಟಿ20 ವಿಶ್ವಕಪ್ ಸರಣಿಯಲ್ಲಿ ಉತ್ತಮವಾಗಿ ಆಡುವ ಮೂಲಕ ಅಭಿಮಾನಿಗಳಲ್ಲಿ ಏಷ್ಯಾಕಪ್ ಸರಣಿಯ ನಿರಾಸೆಯನ್ನು ದೂರಾಗಿಸುವ ಪ್ರಯತ್ನ ಮಾಡಲಿವೆ ಎಂಬುದರಲ್ಲಿ ಎರಡು ಮಾತಿಲ್ಲ. ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಕೂಡ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರೆ ಖಂಡಿತ ವಿಶ್ವಕಪ್ ಟೂರ್ನಿಯಲ್ಲಿ ಅಂತಿಮ ಘಟ್ಟಕ್ಕೆ ತಲುಪಬಲ್ಲವು. ಹೀಗಾಗಿ ಈ ತಂಡಗಳನ್ನು ಕೂಡ ಸರಣಿಯಲ್ಲಿ ನಗಣ್ಯ ಮಾಡುವಂತಿಲ್ಲ.
ಮತ್ತೊಂದೆಡೆ ಈಗಾಗಲೇ ಅರ್ಹತಾ ಸುತ್ತಿನಲ್ಲಿ ಅಚ್ಚರಿ ಫಲಿತಾಂಶ ನೀಡಿರುವ ಆಫ್ಘಾನಿಸ್ತಾನ ತಂಡ ನಿರೀಕ್ಷೆಯಂತೆಯೇ ಪ್ರಧಾನ ಸುತ್ತಿಗೆ ಅರ್ಹತೆ ಗಿಟ್ಟಿಸಿದೆ. ಪಾಕಿಸ್ತಾನ ಕ್ರಿಕೆಟ್ ತಂಡ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಅವರ ಗರಡಿಯಲ್ಲಿ ಪಳಗಿರುವ ಆಫ್ಘನ್ ಪಡೆ ಯಾವುದೇ ಕ್ಷಣದಲ್ಲಿ ಎದುರಾಳಿ ತಂಡಗಳಿಗೆ ಶಾಕ್ ನೀಡಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು ಏಷ್ಯಾಕಪ್ ಟೂರ್ನಿಯಲ್ಲಿ ಶ್ರೀಲಂಕಾ, ಪಾಕಿಸ್ತಾನದಂತಹ ಬಲಾಢ್ಯ ತಂಡಗಳನ್ನು ಮಣಿಸಿ ಫೈನಲ್ ಗೇರಿದ್ದ ಬಾಂಗ್ಲಾದೇಶ ಕೂಡ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದು, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಈ ಮೂರೂ ವಿಭಾಗಗಳಲ್ಲಿ ಉತ್ತಮ ನಿರ್ವಹಣೆ ಹೊಂದಿದೆ. ಅರ್ಹತಾ ಸುತ್ತಿನಲ್ಲಿ ಆಡಿರುವ ಎಲ್ಲ ಮೂರೂ ಪಂದ್ಯಗಳನ್ನು ಬಾಂಗ್ಲಾದೇಶ ಗೆದ್ದಿದೆ. ಹೀಗಾಗಿ ಮುಶ್ರಫೆ ಮೋರ್ತಾಜಾ ಪಡೆ ಕೂಡ ಯಾವುದೇ ಸಂದರ್ಭದಲ್ಲಿ ವಿಶ್ವದ ಇತರೆ ಬಲಾಢ್ಯ ತಂಡಗಳಿಗೆ ಶಾಕ್ ನೀಡಬಲ್ಲದು.
ಒಟ್ಟಾರೆ ಈ ಬಾರಿಯ ಟಿ20 ವಿಶ್ವಕಪ್ ಹಲವು ವೈಶಿಷ್ಟ್ಯ ಮತ್ತು ಅಚ್ಚರಿಗಳೊಂದಿಗಿರಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಟಿ20 ವಿಶ್ವಕಪ್ ನ ಅಂತಿಮ 10 ತಂಡಗಳ ಪಟ್ಟಿಯಲ್ಲಿರುವ ತಂಡಗಳು ಇಂತಿವೆ.
ಗ್ರೂಪ್ ಎ
ಶ್ರೀಲಂಕಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ಆಫ್ಘಾನಿಸ್ತಾನ
ಗ್ರೂಪ್ ಬಿ
ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್
- ಶ್ರೀನಿವಾಸ ಮೂರ್ತಿ ವಿಎನ್