ಕೋಲ್ಕತ್ತಾ: ಟೂರ್ನಿಯ ಆರಂಭದ ದಿನದಿಂದಲೂ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಣ ಐಸಿಸಿ ವಿಶ್ವ ಟ್ವೆಂಟಿ–20 ಕ್ರಿಕೆಟ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ಶನಿವಾರ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.
ಉಭಯ ತಂಡಗಳಿಗೂ ಗೆಲುವು ಅನಿವಾರ್ಯವಾಗಿರುವ ಈ ಪಂದ್ಯ ಕೇವಲ ಭಾರತ-ಪಾಕಿಸ್ತಾನ ತಂಡಗಳಿಗೆ ಮಾತ್ರವಲ್ಲ ಬದಲಿಗೆ ಇಡೀ ವಿಶ್ವದ ಕ್ರಿಕೆಟ್ ಆಸಕ್ತರು ಕುತೂಹಲದಿಂದ ಕಾಯುವಂತೆ ಮಾಡಿದೆ. ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿರುವ ಭಾರತ ತಂಡ ಟೂರ್ನಿಯಲ್ಲಿ ಮುಂದುವರೆಯಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯಕ್ಕೆ ಸಿಲುಕಿದೆ. ಅಂತೆಯೇ ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಸೋತಿಲ್ಲ ಎಂಬ ಖ್ಯಾತಿಯನ್ನು ಉಳಿಸಿಕೊಳ್ಳಲು ಕೂಡ ಭಾರತ ಈ ಪಂದ್ಯವನ್ನು ಗೆಲ್ಲಲೇಬೇಕಿದೆ.
ಇನ್ನು ಪಾಕಿಸ್ತಾನ ತಂಡದತ್ತ ಬರುವುದಾದರೆ, ಟೂರ್ನಿಯಲ್ಲಿ ಈಗಾಗಲೇ ಒಂದು ಜಯ ಸಾಧಿಸಿರುವ ಪಾಕಿಸ್ತಾನ, ಈ ಪಂದ್ಯವನ್ನು ಗೆದ್ದರೆ ತನ್ನ ಉಪಾಂತ್ಯ ಹಾದಿಯನ್ನು ಸುಗಮಗೊಳಿಸಿಕೊಳ್ಳಲಿದೆ. ಅಂತೆಯೇ ಭಾರತದ ವಿರುದ್ಧ ವಿಶ್ವಕಪ್ ನಲ್ಲಿ ಗೆದಿಲ್ಲ ಎಂಬ ಹಣೆಪಟ್ಟಿಯನ್ನೂ ಕೂಡ ಈ ಗೆಲುವಿನ ಮೂಲಕ ಪಾಕಿಸ್ತಾನ ತೊಡೆದು ಹಾಕಲಿದೆ. ಹೀಗಾಗಿ ಉಭಯ ದೇಶಗಳಿಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದ್ದು, ಪ್ರೇಕ್ಷಕರಿಗಂತೂ ಈ ಪಂದ್ಯ ಮನರಂಜನೆಯ ಭೂರಿ ಭೋಜನವನ್ನೇ ಉಣಬಡಿಸುವುದರಲ್ಲಿ ಎರಡು ಮಾತಿಲ್ಲ.
ಭಾರತಕ್ಕೆ ಜಯ ಅನಿವಾರ್ಯ
2007ರ ಟೂರ್ನಿಯ ಚಾಂಪಿಯನ್ ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಭಾರತ ತಂಡ ಈ ಬಾರಿ ನಾಕೌಟ್ ಪ್ರವೇಶದ ಕನಸು ಉಳಿಸಿಕೊಳ್ಳಬೇಕಾದರೆ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ತಂಡ ಬ್ಯಾಟಿಂಗ್ ವೈಫಲ್ಯ ಕಂಡು ನ್ಯೂಜಿಲೆಂಡ್ ಎದುರು ಸೋತಿತ್ತು. ಆದರೆ ‘ಬೂಮ್, ಬೂಮ್’ ಎಂದೇ ಹೆಸರಾಗಿರುವ ಅಫ್ರಿದಿ ನಾಯಕತ್ವದ ಪಾಕ್ ತಂಡ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಎರಡನೇ ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಆದ್ದರಿಂದ ದೋನಿ ಪಡೆಗೆ ಇದು ‘ಮಾಡು ಇಲ್ಲವೇ ಮಡಿ’ ಹೋರಾಟ ವೆನಿಸಿದೆ. ಈ ಪಂದ್ಯವನ್ನು ಬಿಟ್ಟು ಭಾರತ ಇನ್ನುಳಿದ ಹೋರಾಟಗಳಲ್ಲಿ ಬಾಂಗ್ಲಾದೇಶ, ಆಸ್ಟ್ರೇಲಿಯಾ ಎದುರು ಆಡಬೇಕಿದೆ.
ಜೊತೆಗೆ ಈ ಪಂದ್ಯದಲ್ಲಿ ಯಾರೇ ಗೆದ್ದರೂ ಹೊಸ ದಾಖಲೆ ನಿರ್ಮಾಣ ವಾಗಲಿದೆ. ಏಕೆಂದರೆ ಪಾಕ್ ತಂಡ ಈಡನ್‌ನ ಗಾರ್ಡ್‌ನ್ಸ್‌ನಲ್ಲಿ ಒಮ್ಮೆಯೂ ಸೋತಿಲ್ಲ. ಭಾರತ ವಿಶ್ವ ಟೂರ್ನಿಯಲ್ಲಿ ಪಾಕ್ ಎದುರು ಒಮ್ಮೆಯೂ ಮಣಿದಿಲ್ಲ.
ಪಂದ್ಯದ ಮೇಲೆ ಮಳೆ ಆತಂಕ
ಇನ್ನು ಭಾರತ-ಪಾಕಿಸ್ತಾನ ತಂಡಗಳ ನಡುವಿನ ಈ ಹೈವೋಲ್ಟೇಜ್ ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗುವ ಆತಂಕವೇರ್ಪಟ್ಟಿದೆ. ಶನಿವಾರ ಬೆಳಗಿನಿಂದಲೇ ಕೋಲ್ಕತಾದಲ್ಲಿ ಭಾರಿ ಮಳೆಯಾಗುತ್ತಿದ್ದು, ಸಂಜೆ ನಡೆಯುವ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಆತಂಕ ವ್ಯಕ್ತವಾಗಿದೆ. ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ಈಡನ್ ಗಾರ್ಡೆನ್ ಪಿಚ್ ಮತ್ತು ಹೊರವಲಯದಲ್ಲಿ ಹೊದಿಕೆ ಹೊದಿಸಲಾಗಿದೆ.