ಬೆಂಗಳೂರು: ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ 1 ರನ್ ಅಂತರದಲ್ಲಿ ವಿರೋಚಿತ ಸೋಲು ಕಂಡಿದೆ. ಆದರೆ ಗೆಲುವಿನ ಸನಿಹಕ್ಕೆ ಬಂದು ಬಾಂಗ್ಲಾದೇಶ ಸೋಲಲು ಕಾರಣವೇನು.. ಇಲ್ಲಿದೆ ಆ ಬಗ್ಗೆ ಒಂದಷ್ಟು ಮಾಹಿತಿ..
ಬಾಂಗ್ಲಾದ ಅತಿಯಾದ ಆತ್ಮವಿಶ್ವಾಸ
ನಿಜಕ್ಕೂ ಬಾಂಗ್ಲಾದೇಶದ ಸೋಲಿಗೆ ಆ ತಂಡ ಮಾಡಿಕೊಂಡ ಸ್ವಯಂಕೃತ ಅಪರಾಧವೇ ಕಾರಣ ಎಂದು ಹೇಳಬಹುದು. ಏಕೆಂದರೆ ಸುಲಭವಾಗಿ ಗೆಲ್ಲಬಹುದ್ದಿದ್ದ ಪಂದ್ಯವನ್ನು ಕೊನೆಯ ಹಂತದಲ್ಲಿ ಕಠಿಣ ಮಾಡಿಕೊಂಡು ಕೊನೆಯ ಓವರ್ ನಲ್ಲಿ ಅನಗತ್ಯ ಹೊಡೆತಗಳಿಗೆ ಕೈಹಾಕಿ ಬಾಂಗ್ಲಾದೇಶ ಕೈ ಸುಟ್ಟಿಕೊಂಡಿತು. ಪ್ರಮುಖವಾಗಿ ಭಾರತ ನೀಡಿದ್ದ 146 ರನ್ ಗಳ ಸಾಧಾರಣ ಮೊತ್ತವನ್ನು ಬಾಂಗ್ಲಾದೇಶ ಬಹುಶಃ ಲಘುವಾಗಿ ಪರಿಗಣಿಸಿತ್ತು ಎಂದು ಕಾಣುತ್ತದೆ. ಇದರ ನಡುವೆ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್, ಶಬ್ಬೀರ್ ರೆಹಮಾನ್ ಮತ್ತು ಅಂತಿಮ ಹಂತದಲ್ಲಿ ಬ್ಯಾಟಿಂಗ್ ಗೆ ಇಳಿಗ ಸೌಮ್ಯ ಸರ್ಕಾರ್ ಉತ್ತಮ ರನ್ ಗಳಿಸಿದ್ದರಾದರೂ, ಭಾರತ ವಿರುದ್ಧ ಗೆಲ್ಲಬಹುದೆಂಬ ಅವರ ಭಾವನೆ ಅವರನ್ನು ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾಗುವಂತೆ ಮಾಡಿತು. ಕೆಟ್ಟ ಹೊಡೆತಗಳಿಗೆ ಕೈಹಾಕಿ ಅನಗತ್ಯವಾಗಿ ವಿಕೆಟ್ ಕೈಚೆಲ್ಲಿದ್ದರು.
ಕೊನೆಯವರೆಗೂ ಪ್ರಯತ್ನ ಕೈಬಿಡದ ಭಾರತ
ಬಾಂಗ್ಲಾದೇಶದ ಸೋಲಿಗೆ ಪ್ರಮುಖ ಕಾರಣವೆಂದರೆ ಭಾರತೀಯ ಕ್ರಿಕೆಟ್ ತಂಡದ ಕೊನೆಯವರೆಗಿನ ಸತತ ಪ್ರಯತ್ನ ಆ ತಂಡದ ಕೈ ಹಿಡಿಯಿತು. ಕೊನೆಯ ಓವರ್ ನಲ್ಲಿಯೂ ಸಹ ಬಾಂಗ್ಲಾದೇಶ ಸತತ 2 ಬೌಂಡರಿ ಬಾರಿಸಿ ಬಹುತೇಕ ಗೆಲುವು ತನ್ನದಾಗಿಸಿಕೊಂಡಿತ್ತು. ಆದರೆ ನಾಯಕ ಧೋನಿ ಹಾಗೂ ಆ ಹಂತದಲ್ಲಿ ಅದ್ಭುತ ಎನ್ನುವಂತ ಕ್ಷೇತ್ರ ರಕ್ಷಣೆ ಮಾಡಿದ ಭಾರತ ತಂಡ ನಿಜಕ್ಕೂ ಕೈ ಜಾರಿದ್ದ ಪಂದ್ಯವನ್ನು ಮತ್ತೆ ತಮ್ಮ ಕೈಗೆ ತೆಗೆದುಕೊಂಡು ಗೆಲುವು ಸಾಧಿಸಿದರು. ಅಂತಿಮ ಹಂತದವರೆಗೂ ಹೋರಾಟ ನಡೆಸಿದ ಭಾರತ ನಿಜಕ್ಕೂ ಶ್ಲಾಘನೆಗೆ ಪಾತ್ರವಾಗಿತ್ತು.
ಗ್ಲಾಮರ್ ಶಾಟ್ ವ್ಯಾಮೋಹ
ಕೊನೆಯ ಓವರ್ ನಲ್ಲಿ 2 ಬೌಂಡರಿ ಬಾರಿಸಿ ತಂಡವನ್ನು ಬಹುತೇಕ ಗೆಲುವಿನ ಸನಿಹಕ್ಕೆ ಕರೆತಂದಿದ್ದ ಬಾಂಗ್ಲಾ ಆಟಗಾರ ಮುಶ್ಫಿಕರ್ ರಹೀಮ್ ಗೆಲುವಿಗೆ 2 ರನ್ ಬೇಕಿದ್ದಾಗ ಗ್ಲಾಮರ್ ಶಾಟ್ ಮೂಲಕ ಬೌಂಡರಿ ಸಿಡಿಸಿ ಗೆಲುವಿನ ರನ್ ಸಿಡಿಸಲು ಮುಂದಾದರು. ಆದರೆ ಅವರ ಪ್ರಯತ್ನ ಅವರಿಗೆ ತಿರುಗುಬಾಣವಾಗಿ ಬಾಂಗ್ಲಾಕ್ಕೆ ಮುಳುವಾಯಿತು. ಪಾಂಡ್ಯಾ ಎಸೆದ ಅಂತಿಮ ಓವರ್ ನ ನಾಲ್ಕನೇ ಎಸೆತವನ್ನು ಮುಶ್ಫಿಕರ್ ಡೀಪ್ ಮಿಡ್ ವಿಕೆಟ್ ನತ್ತ ಭಾರಿಸಿದರು. ಆದರೆ ಅಲ್ಲಿ ಅದ್ಭುತವಾದಿ ಕ್ಷೇತ್ರ ರಕ್ಷಣೆ ಮಾಡಿದ್ದ ಶಿಖರ್ ಧವನ್ ಕ್ಯಾಚ್ ಪಡೆಯುವ ಮೂಲಕ ಮುಶ್ಫಿಕರ್ ಅವರನ್ನು ಔಟ್ ಮಾಡಿದರು. ಬಳಿಕ ಕ್ರೀಸ್ ಗೆ ಬಂದ ಮಹಮದುಲ್ಲಾ ಕೂಡ ಅದೇ ತಪ್ಪನ್ನು ಮಾಡಿದರು. ಪಾಂಡ್ಯಾ ಎಸೆದ ಫುಲ್ ಟಾಸ್ ಎಸೆತವನ್ನು ಕವರ್ ನತ್ತ ಬೀಸಿದರು. ಅಲ್ಲಿ ಮತ್ತೆ ಅದ್ಭುತ ಕ್ಷೇತ್ರ ರಕ್ಷಣೆ ಮಾಡಿದ್ದ ರವೀಂದ್ರ ಜಡೇಜಾ ಕ್ಯಾಚ್ ಪಡೆಯುವ ಮೂಲಕ ಅವರನ್ನು ಔಟ್ ಮಾಡಿದರು. ಆರನೇ ಹಾಗೂ ಅಂತಿಮ ಎಸೆತದಲ್ಲಿ 2 ಗಳಿಸುವ ಅನಿವಾರ್ಯತೆಗೆ ಸಿಲುಕಿದ ಬಾಂಗ್ಲಾಗೆ ಈ ಬಾರಿ ಪಾಂಡ್ಯಾ ಮುಳುವಾದರು. ಕ್ರೀಸ್ ನಲ್ಲಿದ್ದ ಶುವಾಗತ ಪಾಂಡ್ಯಾ ಎಸೆತವನ್ನು ತಪ್ಪಾಗಿ ಗ್ರಹಿಸಿ ಆಡಲು ಸಾಧ್ಯವಾಗದೇ ಒಂದು ರನ್ ಕದಿಯುವ ಪ್ರಯತ್ನ ಮಾಡಿದರು. ಈ ವೇಳೆ ವಿಕೆಟ್ ಹಿಂದಿದ್ದ ಧೋನಿ ಬಾಲ್ ನೊಡನೇ ವಿಕೆಟ್ ನತ್ತ ಓಡಿ ಬಂದು ಮುಸ್ತಫಿಜುರ್ ರೆಹಮಾನ್ ರನ್ನು ರನ್ ಔಟ್ ಮಾಡಿದರು. ಆ ಮೂಲಕ ಭಾರತ ರೋಚಕ ಜಯ ಸಾಧಿಸಿತು.
ಪಾಂಡ್ಯಾರ ಮ್ಯಾಜಿಕಲ್ 3 ಎಸೆತಗಳು
ಒಂದು ವೇಳೆ ಭಾರತ ಈ ಪಂದ್ಯ ಕೈ ಚೆಲ್ಲಿದ್ದರೆ ಈಗ ಹೀರೋ ಆಗಿರುವ ಹಾರ್ದಿಕ್ ಪಾಂಡ್ಯ ನಿಜಕ್ಕೂ ವಿಲನ್ ಆಗಿರುತ್ತಿದ್ದರು. ಏಕೆಂದರೆ ತಮ್ಮ ಮೊದಲ 2 ಓವರ್ ಗಳಲ್ಲಿ ಬರೊಬ್ಬರಿ 20 ರನ್ ನೀಡಿದ್ದ ಪಾಂಡ್ಯಾ, ಮೂರನೇ ಹಾಗೂ ಅಂತಿಮ ಓವರ್ ನಲ್ಲಿಯೂ ಅದೇ ರೀತಿ ರನ್ ಗಳನ್ನು ನೀಡಿದ್ದರು. ಅದೂ ಕೂಡ ಪಂದ್ಯದ ಅಂತಿಮ ಓವರ್ ನಲ್ಲಿ. ಎರಡು ಮತ್ತು ಮೂರನೇ ಎಸೆತಗಳಲ್ಲಿ ಮುಶ್ಫಿಕರ್ ರಹೀಮ್ ರಿಂದ ದಂಡನೆಗೆ ಒಳಗಾಗಿದ್ದ ಪಾಂಡ್ಯಾ ಆ ಬಳಿಕದ ಮೂರು ಎಸೆತಗಳಲ್ಲಿ ನಿಜಕ್ಕೂ ಮ್ಯಾಜಿಕ್ ಮಾಡಿದ್ದರು. ಸತತ 2 ಬೌಂಡರಿ ಸಿಡಿಸಿ ಅತೀವ ಆತ್ಮ ವಿಶ್ವಾಸದಿಂದ ಇದ್ದ ಮುಶ್ಫಿಕರ್ ರಹೀಮ್ ರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಮೊದಲ ಮುನ್ನಡೆ ತಂದಿತ್ತರು. ಆ ಬಳಿಕ ಕ್ರೀಸ್ ಗೆ ಆಗಮಿಸಿದ ಮಹಮದುಲ್ಲಾರನ್ನು ಕೂಡ ತಮ್ಮ ಫುಲ್ ಟಾಸ್ ಎಸೆತದ ಮೂಲಕ ಕ್ಯಾಚ್ ನೀಡುವಂತೆ ಪ್ರೇರೇಪಿಸಿ ಔಟ್ ಮಾಡಿದರು. ಕೊನೆಯ ಎಸೆತದಲ್ಲಿ ಶುವಾಗತರ ಬ್ಯಾಟ್ ಸಿಗದಂತೆ ಉತ್ತಮ ಲೈನ್ ಅಂಡ್ ನೆನ್ತ್ ಮೂಲಕ ಬೌಲ್ ಮಾಡಿ ಮುಸ್ತಫಿಜುರ್ ರೆಹಮಾನ್ ಆಗುವಂತೆ ಪಾಂಡ್ಯಾ ಮಾಡಿದರು. ಪಾಂಡ್ಯಾ ಅವರ ಅಂತಿಮ ಈ ಮೂರು ಎಸೆತಗಳು ನಿಜಕ್ಕೂ ಭಾರತ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿತ್ತು.
ಧೋನಿ ಚಾಣಾಕ್ಷತನ ನಾಯಕತ್ವ
ಇನ್ನು ಇಡೀ ಪಂದ್ಯದಲ್ಲಿ ಗಮನ ಸೆಳೆದಿದ್ದು, ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಚಾಣಾಕ್ಷತನದ ನಾಯಕತ್ವ. ಬಾಂಗ್ಲಾದೇಶ ಎಲ್ಲೆಲ್ಲಿ ಮುನ್ನಡೆ ಸಾಧಿಸುತ್ತದೆಯೋ ಆಗ ಬೌಲಿಂಗ್ ನಲ್ಲಿ ಮತ್ತು ಕ್ಷೇತ್ರ ರಕ್ಷಣೆಯಲ್ಲಿ ಬದಲಾವಣೆ ತರುವ ಮೂಲಕ ಬಾಂಗ್ಲಾ ಮೇಲೆ ಒತ್ತಡ ಹೇರಿದರು. ಪ್ರಮುಖವಾಗಿ ಅದಾಗಲೇ 2 ಓವರ್ ನಲ್ಲಿ ಬಾಂಗ್ಲಾ ದಾಂಡಿಗರಿಂದ ದಂಡನೆಗೆ ಒಳಗಾಗಿದ್ದ ಪಾಂಡ್ಯಾ ಕೈಗೆ ಅಂತಿಮ ಓವರ್ ಎಸೆಯಲು ಬಾಲ್ ನೀಡುವ ಮೂಲಕ ನಿಜಕ್ಕೂ ಧೋನಿ ಗ್ಯಾಬ್ಲಿಂಗ್ ಮಾಡಿದ್ದರು. ಆದರೆ ಧೋನಿ ನಂಬಿಕೆಯನ್ನು ಉಳಿಸಿಕೊಂಡ ಪಾಂಡ್ಯಾ ಆ ಪಂದ್ಯದ ಹೀರೋ ಆದರು.