ಮೊಹಾಲಿ: ಕೇವಲ ನ್ಯೂಜಿಲೆಂಡ್ ವಿರುದ್ಧದ ಒಂದು ಸೋಲು ಟಿ20 ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಯಾವ ಮಟ್ಟಿತ್ತೆ ತಂದು ನಿಲ್ಲಿಸಿದೆ ಎಂದರೆ, ಭಾರತ ತಾನಾಡುವ ಪ್ರತೀ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಹೀಗಾಗಿ ನಾಳೆ ಮೊಹಾಲಿಯಲ್ಲಿ ನಡೆಯಲಿರುವ ಭಾರತ 4ನೇ ಪಂದ್ಯ ಕೂಡ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಒಂದರ್ಥದಲ್ಲಿ ಈ ಪಂದ್ಯ ಉಭಯ ತಂಡಗಳಿಗೆ ಕ್ವಾರ್ಟರ್ ಫೈನಲ್ ಪಂದ್ಯವಾಗಿದೆ. ಇಲ್ಲಿ ಗೆದ್ದ ತಂಡ ಸೆಮಿಫೈನಲ್ ಗೇರುವುದು ಖಚಿತ. ಹೀಗಾಗಿ ಭಾರತ ತಂಡ ಸಕಲ ರೀತಿಯಲ್ಲಿಯೂ ಸಜ್ಜಾಗುವುದು ಅನಿವಾರ್ಯ. ತನ್ನೆಲ್ಲಾ ಸಾಮರ್ಥ್ಯವನ್ನು ಒಟ್ಟುಗೂಡಿಸಿ ಆಡದ ಹೊರತು ಭಾರತ ತಂಡ ಆಸ್ಟ್ರೇಲಿಯಾವನ್ನು ಮಣಿಸುವುದು ಅಸಾಧ್ಯ.
ಈ ಹಿನ್ನಲೆಯಲ್ಲಿ ಭಾರತ ತಂಡ ತನ್ನ ಲೋಪದೋಷಗಳನ್ನು ಸರಿಪಡಿಸಿಕೊಂಡು ನಾಳಿನ ಹೋರಾಟಕ್ಕೆ ಸಜ್ಜಾಗಬೇಕಿದೆ. ಟೀಂ ಇಂಡಿಯಾದ ಒಂದು ಸಣ್ಣ ತಪ್ಪು ಕೂಡ ಆಸ್ಚ್ರೇಲಿಯಾ ತಂಡಕ್ಕೆ ದೊಡ್ಡ ವರದಾನವಾಗುವ ಅಪಾಯವಿದೆ. ಹೀಗಾಗಿ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಚ್ಚು ರಿಸ್ಕ್ ತೆಗೆದುಕೊಳ್ಳದೇ ಪಂದ್ಯ ಗೆಲ್ಲುವ ನಿಟ್ಟಿನಲ್ಲಿ ಬಲಿಷ್ಠ ತಂಡವನ್ನು ಕಣಕ್ಕಿಳಿಸಬೇಕಿದೆ.
ರಹಾನೆ-ಭಜ್ಜಿ ಡ್ರಿಂಕ್ಸ್ ನೀಡುವ ಬದಲು ಅಂಗಳಕ್ಕೆ ಇಳಿಯಬೇಕು
ಕಳೆದ ನಾಲ್ಕು ಪಂದ್ಯಗಳಲ್ಲಿ ಆರಂಭಿಕ ಆಟಗಾರ ಶಿಖರ್ ಧವನ್ ಮೇಲೆ ಧೋನಿ ಹೆಚ್ಚು ನಂಬಿಕೆ ಇಟ್ಟಿದ್ದರು. ಧವನ್ ಸ್ಫೋಟಕ ಬ್ಯಾಟ್ಸಮನ್ ಆಗಿರಬಹುದು. ಆದರೆ ಆಸ್ಟ್ರೇಲಿಯಾದಂತಹ ದೈತ್ಯ ತಂಡದೊಂದಿಗೆ ಸೆಣಸುವಾಗ ಸ್ಫೋಟಕ ಆಟದೊಂದಿಗೆ ತಾಳ್ಮೆಯ ಆಟ ಕೂಡ ಮುಖ್ಯವಾಗುತ್ತದೆ. ಹೀಗಾಗಿ ನಾಳಿನ ಪಂದ್ಯದಲ್ಲಿ ಶಿಖರ್ ಧವನ್ ಬದಲಿಗೆ ಮತ್ತೋರ್ವ ಆರಂಭಿಕ ಆಟಗಾರ ಅಜಿಂಕ್ಯಾ ರಹಾನೆಗೆ ಅವಕಾಶ ನೀಡಬೇಕಿದೆ.
ಅಜಿಂಕ್ಯಾ ರಹಾನೆಗೆ ರಕ್ಷಣಾತ್ಮಕ ಆಟ ಮತ್ತು ಆಕ್ರಮಣಕಾರಿ ಆಟ ಎರಡೂ ಬಗೆಯ ಬ್ಯಾಟಿಂಗ್ ತಿಳಿದಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಎಂತಹುದೇ ಸ್ಥಿತಿ ನಿರ್ಮಾಣವಾದರೂ ತಮ್ಮ ಸಮಯೋಚಿತ ಬ್ಯಾಟಿಂಗ್ ಮೂಲಕ ರಹಾನೆ ಭಾರತದ ನೆರವಿಗೆ ನಿಲ್ಲಬಲ್ಲರು. ಸುರೇಶ್ ರೈನಾ ಅವರನ್ನು ಹೊರತು ಪಡಿಸಿದರೆ ಭಾರತದ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ. ರಹಾನೆ ಮತ್ತು ರೋಹಿತ್ ಶರ್ಮಾ ತಂಡಕ್ಕೆ ಉತ್ತಮ ಆರಂಭ ನೀಡಿದರೆ ಅದನ್ನು ಗೆಲುವಾಗಿ ಪರಿಣಮಿಸುವ ಸಾಮರ್ಥ್ಯ ಧೋನಿ, ಕೊಹ್ಲಿ ಮತ್ತು ಯುವಿ ಅವರಿಗಿದೆ. ಇನ್ನು ಅಂತಿಮ ಹಂತದಲ್ಲಿ ಚಾಕಚಕ್ಯತೆಯಿಂದ ಬ್ಯಾಟ್ ಬೀಸುವ ಪಾಂಡ್ಯಾ, ಅಶ್ವಿನ್ ಮತ್ತು ರವೀಂದ್ರ ಜಡೇಜಾರಂತಹ ಆಲ್ ರೌಂಡರ್ ಆಟಗಾರರಿದ್ದಾರೆ.
ಸುರೇಶ್ ರೈನಾ ಬ್ಯಾಟಿಂಗ್ ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿದ್ದು, ಬೌಲಿಂಗ್ ನಲ್ಲಿ ಕೊಂಚ ಯಶ ಕಂಡರೂ ಅದು ಸಾಲುತ್ತಿಲ್ಲ. ಪ್ರಸ್ತುತ ಟೀಂ ಇಂಡಿಯಾದ ಆಟಗಾರರಲ್ಲಿ ವೈಫಲ್ಯತೆ ಅಂತ ಏನಾದರೂ ಇದ್ದರೆ, ಅದು ಖಂಡಿತಾ ಶಿಖರ್ ಧವನ್ ಮತ್ತು ಸುರೇಶ್ ರೈನಾರದ್ದು ಮಾತ್ರ. ಹೀಗಾಗಿ ನಾಯಕ ಧೋನಿ ಇವರಿಬ್ಬರ ಬದಲಿಗೆ ರಹಾನೆ ಮತ್ತು ಹರ್ಭಜನ್ ಸಿಂಗ್ ರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕಿದೆ. ಹರ್ಭಜನ್ ಕೂಡ ಆಸ್ಟ್ರೇಲಿಯಾ ವಿರುದ್ಧ ಉತ್ತಮ ಬೌಲಿಂಗ್ ದಾಖಲೆ ಹೊಂದಿದ್ದಾರೆ.