ಮುಂಬೈ: ಗುರುವಾರ ರಾತ್ರಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು 7 ವಿಕೆಟ್‌ನಿಂದ ಮಣಿಸಿ ಫೈನಲ್‌ಗೆ ಪ್ರವೇಶ ಪಡೆದ ವೆಸ್ಟ್ ಇಂಡೀಸ್ ಆಟಗಾರರು ರಾತ್ರಿಯಿಡೀ ಕುಣಿಯುತ್ತಾ ಸಂಭ್ರಮಾಚರಣೆ ಮಾಡಿದ್ದಾರೆ.
ಗೆಲುವಿನ ಸಂಭ್ರಮಾಚರಣೆಯ ಕುಣಿತ ಮೈದಾನದಲ್ಲೇ ಆರಂಭವಾಗಿತ್ತು. ಡ್ವೈಯನ್ ಬ್ರಾವೋ ಮತ್ತು ಇತರ ಆಟಗಾರರು ಚಾಂಪಿಯನ್ ಡ್ಯಾನ್ಸ್ ಮಾಡುತ್ತಾ ಸಂಭ್ರಮಾಚರಣೆ ಮಾಡಿದ ವೀಡಿಯೋವನ್ನು ಐಸಿಸಿ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ್ದು ಆ ಗೆಲುವಿನ ಕುಣಿತ ವೈರಲ್ ಆಗಿದೆ.
ವೆಸ್ಟ್ ಇಂಡೀಸ್ ಆಟಗಾರರ ಗೆಲುವಿನ ಕುಣಿತ ಹೋಟೆಲ್ ರೂಂನಲ್ಲಿಯೂ ಮುಂದುವರಿದಿತ್ತು. ಪಂದ್ಯ ಮುಗಿಸಿ ಹೋಟೆಲ್‌ಗೆ ಬಸ್‌ನಲ್ಲಿ ಬಂದಿಳಿದ ಆಟಗಾರರು ಹೋಟೆಲ್‌ಗೆ ಪ್ರವೇಶಿಸುತ್ತಿದ್ದಂತೆ ಚಾಂಪಿಯನ್ ಡ್ಯಾನ್ಸ್ ಸ್ಟೆಪ್ ಹಾಕಲು ಆರಂಭಿಸಿದರು. ಈ ಡ್ಯಾನ್ಸ್ ವಿಡಿಯೋವನ್ನು ವೆಸ್ಟ್ ಇಂಡೀಸ್ ಟೀಂನ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಪ್ರಸ್ತುತ ವೀಡಿಯೋ ಸಾಮಾಜಿಕ ತಾಣದಲ್ಲೀಗ ಸಂಚಲನ ಸೃಷ್ಟಿಸಿದೆ.
ಪಂದ್ಯ ಮುಗಿದ ನಂತರ ಕುಣಿಯಲು ಆರಂಭಿಸಿದ ಈ ಆಟಗಾರರು ಶುಕ್ರವಾರ ಮುಂಜಾನೆ ವರೆಗೆ ಕುಣಿಯುತ್ತಲೇ ಇದ್ದರು. ಕ್ರಿಸ್ ಗೇಲ್ ಮತ್ತು ಬ್ರಾವೋ ಇಬ್ಬರೂ ಶರ್ಟ್ ಬಿಚ್ಚಿ ಚಾಂಪಿಯನ್ ಹಾಡಿಗೆ ಸ್ಟೆಪ್ ಹಾಕಿದ್ದನ್ನು ಕ್ರಿಸ್ ಗೇಲ್ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ.