ನವದೆಹಲಿ: ಇನ್ನು ಮುಂದೆ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗುವ ಯಾವುದೇ ಕ್ರೀಡಾಪಟುವಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಬಹುದಾದ ನೂತನ ವಿಧೇಯಕವನ್ನು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು ಸಿದ್ಧಪಡಿಸಿದ್ದಾರೆ.
ಲೋಕಸಭಾ ಸದಸ್ಯರೂ ಆಗಿರುವ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಮೂರು ಖಾಸಗಿ ವಿಧೇಯಕಗಳನ್ನು ಸಿದ್ಧಪಡಿಸಿದ್ದು, ಮ್ಯಾಚ್ ಫಿಕ್ಸಿಂಗ್ ನಡೆಸುವ ಯಾವುದೇ ಕ್ರೀಡಾಪಟುವಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ಶಿಫಾರಸು ಒಳಗೊಂಡಿರುವ ‘ರಾಷ್ಟ್ರೀಯ ಕ್ರೀಡಾ ನೀತಿಸಂಹಿತೆ ಆಯೋಗ’ ಎಂಬ ವಿಧೇಯಕವೂ ಇದರಲ್ಲಿ ಸೇರಿದೆ ಎಂದು ತಿಳಿದುಬಂದಿದೆ. ಕ್ರಿಕೆಟಿಗರಾದ ಶ್ರೀಶಾಂತ್, ಅಜಿತ್ ಚಾಂಡೀಲಾ ಮತ್ತು ಅಂಕಿತ್ ಚೌಹ್ವಾಣ್ ಹೆಸರುಗಳು ಕೇಳಿಬಂದಿದ್ದ 2013ರ ಐಪಿಎಲ್ ನಲ್ಲಿ ಭುಗಿಲೆದ್ದ ಸ್ಪಾಟ್ ಫಿಕ್ಸಿಂಗ್ ಹಗರಣದ ಹಿನ್ನೆಲೆಯಲ್ಲಿ ಠಾಕೂರ್ ಅವರ ಈ ನಡೆ ಮಹತ್ವದ್ದೆನಿಸಿದೆ.
‘ಕ್ರೀಡಾಪ್ರೇಮಿಗಳಿಗೆ ನ್ಯಾಯ ಒದಗಿಸುವ ಸಲುವಾಗಿ ಕ್ರೀಡಾಪಟುಗಳು ವಿಶ್ವಾಸಾರ್ಹರಾಗಿರುವಂತೆ ನೋಡಿಕೊಳ್ಳುವುದು ಅಗತ್ಯ. ಸದ್ಯ ಮ್ಯಾಚ್ ಫಿಕ್ಸಿಂಗ್ ತಡೆಯುವಂಥ ಯಾವುದೇ ಕಾನೂನು ಇಲ್ಲ. ಇಂಥ ಪೀಡೆಯನ್ನು ತೊಲಗಿಸುವಂಥ ಕಾನೂನು ಅಗತ್ಯವಾಗಿದೆ’ ಎಂದು ವಿಧೇಯಕಗಳನ್ನು ಸಿದ್ಧಪಡಿಸಿರುವ ಅನುರಾಗ್ ಠಾಕೂರ್ ಅವರು ತಿಳಿಸಿದ್ದಾರೆ.
ಈ ಮೂರು ವಿಧೇಯಕಗಳು ಕೇವಲ ಮ್ಯಾಚ್ ಫಿಕ್ಸಿಂಗ್ ಮಾತ್ರವಲ್ಲದೇ ಡೋಪಿಂಗ್, ವಯೋಮಿತಿ-ಲಿಂಗ ಮೋಸ ಮತ್ತು ಮಹಿಳೆಯರ ಮೇಲಿನ ಕಿರುಕುಳ ಪ್ರಕರಣಗಳನ್ನು ತಡೆಯಲು ರಾಷ್ಟ್ರೀಯ ಕ್ರೀಡಾ ನೀತಿಸಂಹಿತೆ ಸಂಸ್ಥೆ ರಚಿಸಬೇಕೆಂಬುದು ವಿಧೇಯಕದ ಮೂಲ ಉದ್ದೇಶವಾಗಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.