ಇಂಡಿಯನ್ ಪ್ರೀಮಿಯರ್ ಲೀಗ್‌ನ ಒಂಭತ್ತನೇ ಆವೃತ್ತಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಸೋಲು ಅನುಭವಿಸುತ್ತಲೇ ಇದೆ. ಇದನ್ನು ನೋಡಿದರೆ ಪುಣೆ ತಂಡವನ್ನು ನಾಯಕ ಧೋನಿ ಮುನ್ನಡೆಸುವಲ್ಲಿ ವಿಫಲರಾಗಿದ್ದಾರೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್‌ನ ಮುಂದಾಳತ್ವ ವಹಿಸಿ ಐಪಿಎಲ್ ನಲ್ಲಿ ಚಾಂಪಿಯನ್ ಆಗಿ ದಾಖಲೆ ಬರೆದ ಧೋನಿಗೆ ಪುಣೆ ತಂಡವನ್ನು ಉದಯಿಸುವಂತೆ ಮಾಡಲು ಸಾಧ್ಯವಾಗಲೇ ಇಲ್ಲ.
ಮ್ಯಾಚ್ ಫಿಕ್ಸಿಂಗ್ ವಿವಾದದ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಟೀಂನ್ನು ಐಪಿಎಲ್ ಪಂದ್ಯಗಳಿಂದಲೇ ಡಿಲೀಟ್ ಮಾಡಿದಾಗ, ಪುಣೆ ತಂಡದ ಮಾಲೀಕರು ಧೋನಿಯನ್ನು ಖರೀದಿಸುವ ಮೂಲಕ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಳ್ಳಬಹುದೆಂಬ ಕನಸು ಕಂಡರು. ವಿಶ್ವಕಪ್ ಗೆದ್ದ ನಾಯಕ ಕ್ಯಾಪ್ಟನ್ ಕೂಲ್ ಜತೆಗಿದ್ದರೆ ಪಂದ್ಯ ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆ ಪುಣೆ ತಂಡದ ಮಾಲೀಕರಿಗಿದ್ದರೂ, ಧೋನಿಯ ಸಾಮರ್ಥ್ಯ ಐಪಿಎಲ್ ನಲ್ಲಿ ಮಂಕಾದಂತೆ ಕಂಡಿತು.
ಮಿಂಚಿದ ಸನ್ ರೈಸರ್ಸ್, ಅಸ್ತಮಿಸಿದ ಪುಣೆ
ಸನ್ ರೈಸರ್ಸ್ ಹೈದ್ರಾಬಾದ್‌ನೊಂದಿಗೆ ಪರಾಭವಗೊಳ್ಳುವ ಮೂಲಕ ಪುಣೆ ತಂಡ ಐಪಿಎಎಲ್ ಪ್ಲೇ ಆಫ್‌ಗೆ ಅವಕಾಶ ಗಿಟ್ಟಿಸುವಲ್ಲಿಯೂ ವಿಫಲವಾಗಿದೆ. ಮಂಗಳವಾರ ಸನ್‌ರೈಸರ್ಸ್ ವಿರುದ್ಧ ಪುಣೆಯದ್ದು ನಿರ್ಣಾಯಕ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಹೈದ್ರಾಬಾದ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಇತ್ತ ಪುಣೆ ತಂಡ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಹೈದ್ರಾಬಾದ್ ತಂಡವನ್ನು 137 ರನ್‌ಗಳಿಗೆ ಕಟ್ಟಿ ಹಾಕಿತು. ಹಾಗೆ ನೋಡಿದರೆ ಇದು ದೊಡ್ಡ ಮೊತ್ತವಾಗಿರಲಿಲ್ಲ. ಪುಣೆ ತಂಡಕ್ಕೆ ಈ ಗುರಿ ಮಟ್ಟಲು ಅಸಾಧ್ಯವಂತೂ ಆಗಿರಲಿಲ್ಲ. ಆದರೆ ಆಶಿಶ್ ನೆಹ್ರಾ ಬೌಲಿಂಗ್ ದಾಳಿಗೆ ಪುಣೆ ತತ್ತರಿಸಿ ಹೋಯಿತು.
ಇದೀಗ 6 ಪಾಯಿಂಟ್‌ಗಳನ್ನು ಹೊಂದಿರುವ ಪುಣೆ ಮೂರು ಪಂದ್ಯಗಳನ್ನಾಡಲು ಬಾಕಿ ಇದೆ. 14 ಪಾಯಿಂಟ್‌ಗಳೊಂದಿಗೆ ಸನ್ ರೈಸರ್ಸ್ ಮತ್ತು ಗುಜರಾತ್ ಅಗ್ರ ಸ್ಥಾನದಲ್ಲಿರುವಾಗ ಕೊಲ್ಕತ್ತಾ 12, ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಲಾ 10 ಪಾಯಿಂಟ್ ಗಳಿಸಿಕೊಂಡಿದೆ. ಇದರ ಹಿಂದೆಯೇ 8 ಪಾಯಿಂಟ್ ಗಳಿಸಿ ಆರ್‌ಸಿಬಿ ಇದ್ದರೆ, ಪುಣೆಯೊಂದಿಗೆ ಕಿಂಗ್ಸ್ ಇಲೆವನ್ ಪಂಜಾಬ್ 6 ಪಾಯಿಂಟ್‌ಗಳೊಂದಿಗೆ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಆರು ಐಪಿಎಲ್ ಆವೃತ್ತಿಗಳಲ್ಲಿ ಚೆನ್ನೈನ್ನು ಫೈನಲ್‌ಗೇರಿಸಿದ್ದು ಧೋನಿ ಇಲ್ಲಿ ಮಂಕಾಗಿದ್ದರು. ಸ್ಪಿನ್ ಮಾಂತ್ರಿಕ ರವೀಂದ್ರ ಅಶ್ವಿನ್ ಮೇಲೆ ಧೋನಿ ಭರವಸೆ ಇಟ್ಟುಕೊಂಡಿದ್ದರೂ ಅಶ್ವಿನ್ ಮಿಂಚಲಿಲ್ಲ. ಇತ್ತ ಇರ್ಫಾನ್ ಪಠಾಣ್‌ಗೆ ಒಂದೇ ಒಂದು ಆಟದಲ್ಲಿ ಅವಕಾಶ ಕೊಟ್ಟು ಧೋನಿ ಸುಮ್ಮನಾದರು. ತಂಡದಲ್ಲಿದ್ದ ಡ್ಯುಪ್ಲಿಸ್, ಮೋರ್ಕೆಲ್ ಕೂಡಾ ಆಪತ್ಬಾಂದವರಾಗಲೇ ಇಲ್ಲ. ರೈಸಿಂಗ್ ಪುಣೆ ಮಿನಿ ಸೂಪರ್ ಕಿಂಗ್ಸ್ ಆಗುತ್ತದೆ ಎಂದು ಬಯಸಿದ್ದ ಅಭಿಮಾನಿಗಳು, ಸತತ ಸೋಲುಗಳಿಂದ ಕಂಗೆಡುತ್ತಿರುವ ಪುಣೆ ತಂಡದಿಂದ ಭರವಸೆಯನ್ನೇ ಕಳೆದುಕೊಳ್ಳಬೇಕಾಗಿ ಬಂತು.
ಈ ಹಿಂದೆ ಮಿದಾಸ್ ಟಚ್‌ನಂತೆ ಮುಟ್ಟಿದ್ದೆಲ್ಲವನ್ನೂ ಬಂಗಾರ ಮಾಡುತ್ತಿದ್ದ ಧೋನಿ, ಇಲ್ಲಿ ಎಡವುತ್ತಲೇ ಇದ್ದರು. ಸೋಲುಗಳನ್ನು ಅಪ್ಪಿಕೊಳ್ಳುತ್ತಲೇ ಇದ್ದರೂ ಪಠಾಣ್‌ಗೆ ಅವಕಾಶ ನೀಡದೇ ಇರುವುದು ಧೋನಿ ವಿರುದ್ಧ ಅಭಿಮಾನಿಗಳೇ ತಿರುಗಿ ಬೀಳುವಂತಾಯಿತು. ಅದೇ ವೇಳೆ ಸ್ಟೀವನ್ ಸ್ಮಿತ್, ಕೆವಿನ್ ಪೀಟರ್‌ಸನ್, ಫಾಪ್ ಡ್ಯುಪ್ಲೆಸಿ, ಮಿಶೆಲ್ ಮಾರ್ಷ್ ಮೊದಲಾದ ಘಟಾನುಘಟಿಗಳು ಗಾಯಗೊಂಡು ಹೊರ ಬಿದ್ದಿದ್ದು, ಪುಣೆಗೆ ಬಿದ್ದ ಮೊದಲ ಹೊಡೆತವಾಗಿತ್ತು.
ಇತ್ತ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನೊಂದಿಗೆ ಘರ್ಜಿಸುತ್ತಿದ್ದಾರೆ. 9 ವರ್ಷಗಳಿಂದ ಟೀಂ ಇಂಡಿಯಾದ ನಾಯಕ ಸ್ಥಾನದಲ್ಲಿರುವ ಧೋನಿ ಮುಂದಿನ ವಿಶ್ವಕಪ್ ವರೆಗೆ ನಾಯಕನಾಗಿ ಮುಂದುವರಿಯಬೇಕೆ? ಎಂದು ಸೌರವ್ ಗಂಗೂಲಿ ಪ್ರಶ್ನಿಸುತ್ತಿದ್ದಾರೆ.
ಇದೆಲ್ಲದರ ನಡುವೆ ಕ್ಯಾಪ್ಟನ್ ಕೂಲ್ ಐಪಿಎಲ್‌ನಲ್ಲಿ ಪರಾಭವಗೊಳ್ಳುತ್ತಿದ್ದಾರೆ. ಧೋನಿಯ ಕಾಲ ಮುಗಿಯಿತೇ? ಎಂದು ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ನೋಡುತ್ತಿದ್ದಾರೆ. ಇದಕ್ಕೆಲ್ಲ ಉತ್ತರ ನೀಡುವಂತೆ ಧೋನಿ ಮತ್ತೊಮ್ಮೆ ವಿನ್ನಿಂಗ್ ಶಾಟ್‌ಗಳ ಮೂಲಕ ಭರವಸೆ ಹುಟ್ಟಿಸಬಹುದೆ? ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ.