ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್
ವಿಶಾಖಪಟ್ಟಣಂ: ತಾನೊಬ್ಬ ಅದ್ಭುತ ಫಿನಿಶರ್ ಎಂಬುದನ್ನು ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ವಿಶಾಖಪಟ್ಟಣಂನಲ್ಲಿ ಶನಿವಾರ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಧೋನಿ ನಾಯಕತ್ವದ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡ 4 ವಿಕೆಟ್ ಗೆಲುವು ಸಾಧಿಸಿದೆ.
ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಓಪನಿಂಗ್ ಬ್ಯಾಟ್ಸ್‌ಮೆನ್‌ಗಳಾದ ಹಾಷಿಂ ಆಮ್ಲ ಮತ್ತು ನಾಯಕ ಮುರಳಿ ವಿಜಯ್ ಅವರ ಆರಂಭಿಕ ಬ್ಯಾಟಿಂಗ್ ಪಂಜಾಬ್ ತಂಡಕ್ಕೆ ಭದ್ರ ಬುನಾದಿಯನ್ನು ಹಾಕಿ ಕೊಟ್ಟಿತ್ತು. ಆಮ್ಲ (30) ಮತ್ತು ಮುರಳಿ ವಿಜಯ್ (59) ರನ್ ದಾಖಲಿಸಿದ್ದು, ಇವರಿಬ್ಬರೂ ಅಶ್ವಿನ್ ಬಾಲ್‌ಗೆ ವಿಕೆಟ್ ಕಳೆದುಕೊಂಡಿದ್ದಾರೆ. ನಂತರ ಬಂದರ ಸಾಹಾ ಮೂರು ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದಾಗ ಗುರುಕೀರತ್ ಸಿಂಗ್ 30 ಎಸೆತಗಳಲ್ಲಿ 51 ರನ್ ದಾಖಲಿಸಿದರು. ಈತನ ನಂತರ ಬಂದ ಮಿಲ್ಲರ್ (7), ಬೆಹರ್‌ಡೀನ್ (5), ಎ ಆರ್ ಪಟೇಲ್ (1) ಧವನ್ (11 ಅಜೇಯ), ಅಬ್ಬೋಟ್ (ಅಜೇಯ 1) ರನ್ ಗಳಿಸುವ ಮೂಲಕ ಪಂಜಾಬ್ ಸ್ಕೋರ್ 172ಕ್ಕೆ ತಲುಪಿತು.
ಪುಣೆ ಪರವಾಗಿ ಅಶ್ವಿನ್ 4, ದಿಂಡಾ, ಪರೇರಾ ಮತ್ತು ಝಂಪಾ ತಲಾ ಒಂದು ವಿಕೆಟ್ ಪಡೆದುಕೊಂಡರು.
173ರನ್ ಗುರಿಯನ್ನು ಬೆನ್ನತ್ತಿದ ಪುಣೆ ತಂಡ ಆರಂಭದಲ್ಲಿ ರೆಹಾನೆ ಮತ್ತು ಕ್ವಾಜಾ ಜೋಡಿಯ ಮೂಲಕ ಅಬ್ಬರಿಸಿತು. ರೆಹಾನೆ 15 ಎಸೆತದಲ್ಲಿ 19 ಮತ್ತು ಕ್ವಾಜಾ 29 ಎಸೆತಗಳಲ್ಲಿ 30 ರನ್ ಗಳಿಸಿದರು. ನಂತರ ಕ್ರೀಸ್ ಗಿಳಿದ ಬೈಲಿ ಮತ್ತು ತಿವಾರಿ ಮುಗ್ಗರಿಸಿದರೂ ಆಪತ್ಬಾಂದವನಂತೆ ಬಂದಿದ್ದು ನಾಯಕ ಮಹೇಂದ್ರ ಸಿಂಗ್ ಧೋನಿ. ಧೋನಿಗೆ ಜತೆಯಾಗಲು ಬಂದ ಪಠಾಣ್ (2) ಮತ್ತು ಪರೇರಾ (23) ರನ್ ಗಳಿ ಔಟಾದಾಗ ಧೋನಿ ಏಕಾಂಗಿಯಾಗಿಯೇ ಆಟ ಮುಂದುವರಿಸಿದರು. 23 ಎಸೆತದಲ್ಲಿ 64 ರನ್ ಗಳಿಸಿದ ಧೋನಿ 4 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಟಾಪ್ ಸ್ಕೋರರ್ ಆದರು. ಕೊನೆಯ ಓವರ್‌ನಲ್ಲಿ ಧೋನಿ ಬಾರಿಸಿದ್ದು 23 ರನ್!. ಅಕ್ಷರ್ ಪಟೇಲ್ ಬೌಲಿಂಗ್‌ಗೆ ಧೋನಿ ಮೂರು ಸಿಕ್ಸರ್ ಮತ್ತು ಒಂದು ಬೌಂಡರಿ ಯನ್ನು ಬಾರಿಸಿದ್ದರು. ಇನ್ನೇನು ಗೆಲ್ಲಲು 2 ಬಾಲ್‌ಗಳಲ್ಲಿ 12 ರನ್‌ಗಳ ಅಗತ್ಯವಿದ್ದಾಗ ಧೋನಿ ಎರಡು ಸಿಕ್ಸರ್ ಬಾರಿಸಿ ಬೆಸ್ಟ್ ಫಿನಿಶರ್ ಎಂದೆನಿಸಿಕೊಂಡರು.
ಕೊನೆಯ ಓವರ್‌ನಲ್ಲಿ ಧೋನಿ ನೀಡಿದ ರೋಚಕ ಪ್ರದರ್ಶನದಿಂದಾಗಿ ಪುಣೆ ತಂಡ ಪಂದ್ಯವನ್ನು ಗೆಲ್ಲುವಂತೆ ಮಾಡಿತು. ಧೋನಿ ಅಜೇಯರಾಗಿ 64 ಮತ್ತು ಅಶ್ವಿನ್ (ಅಜೇಯ 1) ರನ್ ಬಾರಿಸಿ 6 ವಿಕೆಟ್ ನಷ್ಟದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಈ ಪಂದ್ಯವನ್ನು ತಮ್ಮದಾಗಿಸಿಕೊಂಡಿತು.
ಪಂಜಾಬ್ ಪರವಾಗಿ ಗುರುಕೀರತ್ ಸಿಂಗ್ 2 ಮತ್ತು ಸಂದೀಪ್ ಶರ್ಮಾ, ಎಂ ಶರ್ಮಾ, ಅಕ್ಷರ್ ಪಟೇಲ್ ಮತ್ತು ಧವನ್ ತಲಾ ಒಂದು ವಿಕೆಟ್ ಕಬಳಿಸಿದ್ದಾರೆ.