ನವದೆಹಲಿ: ನಿವೃತ್ತ ನ್ಯಾಯಮೂರ್ತಿ ಲೋಧಾ ನೇತೃತ್ವದ ಸಮಿತಿ ನಾಲ್ಕು ರಾಜ್ಯ ಕ್ರಿಕೆಟ್ ಸಂಸ್ಥೆಗಳ ವ್ಯವಹಾರದ ಕುರಿತಾಗಿ ಅಕೌಂಟಿಂಗ್ ಸಂಸ್ಥೆ ಡಿಲಾಯ್ಟ್ ನೀಡಿದ ವರದಿಯನ್ನು ನವೆಂಬರ್ 8ರ ಒಳಗಾಗಿ ಸಲ್ಲಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ತಿಳಿಸಿದೆ.
ಹೈದರಾಬಾದ್, ಅಸ್ಸಾಂ, ಒಡಿಶಾ ಮತ್ತು ಜಮ್ಮು ಮತ್ತು ಕಾಶ್ಮೀರದ ಕ್ರಿಕೆಟ್ ಅಸೋಸಿಯೇಷನ್ ನ ಡಿಲಾಯ್ಟ್ ವರದಿಯನ್ನೂ ಸಲ್ಲಿಸಬೇಕು ಎಂದು ಲೋಧ ಸಮಿತಿ ಸೂಚನೆ ನೀಡಿದೆ. ಅಕ್ಟೋಬರ್ 28ರಂದು ಲೋಧಾ ಸಮಿತಿಯ ಕಾರ್ಯದರ್ಶಿ ಗೋಪಾಲ್ ಶಂಕರ್ ನಾರಾಯಣನ್ ಈ ಕುರಿತಾಗಿ ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆಗೆ ಪತ್ರವನ್ನೂ ಬರೆದಿದ್ದರು.
ಅಮೆರಿಕ ಮೂಲದ ಸಂಸ್ಥೆ ಡಿಲಾಯ್ಟ್ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಹಣಕಾಸು ಅವ್ಯವಹಾರದ ಕುರಿತಾಗಿ ಬಿಸಿಸಿಐಗೆ ಅಡಿಟ್ ವರದಿ ಸಲ್ಲಿಸಿದ್ದು ಬಿಸಿಸಿಐ ಬಳಿ ಇರುವ ವರದಿಯನ್ನು ಲೋಧಾ ಸಮಿತಿಗೆ ಐದು ದಿನಗಳ ಒಳಗಾಗಿ ನೀಡಬೇಕು ಎಂದು ಗೋಪಾಲ್ ಶಂಕರ್ ನಾರಾಯಣನ್ ಪತ್ರದಲ್ಲಿ ಬರೆದಿದ್ದರು.
ಇಂಗ್ಲೆಂಡ್ ಜತೆ ಒಪ್ಪಂದ ನಮ್ಮ ವಿಷಯವಲ್ಲ; ಸಮಿತಿ
ಸುಪ್ರೀಂಕೋರ್ಟ್ ನಿಂದ ನೇಮಕಗೊಂಡಿರುವ ಲೋಧಾ ಸಮಿತಿಯನ್ನು ಮುಂಬರುವ ಇಂಗ್ಲೆಂಡ್ ತಂಡದ ಭಾರತ ಪ್ರವಾಸದ ಬಗ್ಗೆ ಬಿಸಿಸಿಐ ಕೇಳಿದ್ದ ಪ್ರಶ್ನೆಗಳಿಗೆ ತಿರುಗೇಟು ನೀಡಿರುವ ಸಮಿತಿ ಇಂಗ್ಲೆಂಡ್ ತಂಡದ ಜತೆ ಒಪ್ಪಂದ ಮಾಡಿಕೊಳ್ಳುವುದು ನಿಮಗೆ ಬಿಟ್ಟ ವಿಷಯ. ಮೊದಲು ನಾವು ಕೇಳಿರುವ ವಿಷಯಗಳ ಕುರಿತು ಮುಚ್ಚಳಿಕೆ ನೀಡಿ, ಬಳಿಕವಷ್ಟೇ ನಾವು ನಿಮಗೇನಾದರೂ ಸೂಚಿಸಬಹುದು ಎಂದು ಹೇಳಿದೆ.