ರಾಂಚಿ: ಭಾರತದ ವಿರುದ್ಧ ರಾಂಚಿಯಲ್ಲಿ ನಡೆಯುತ್ತಿರುವ 4ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ಭರ್ಜರಿ ಆರಂಭ ಮಾಡಿದೆ.
ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ತವರು ಜಿಲ್ಲೆ ರಾಂಚಿಯಲ್ಲಿರುವ ಜೆಎಸ್ ಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 4ನೇ ಏಕದಿನ ಪಂದ್ಯದಸ್ಸಿ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ವಿಲಿಯಮ್ಸನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ನಾಯಕನ ವಿಶ್ವಾಸದಂತೆ ಬ್ಯಾಟಿಂಗ್ ಗೆ ಇಳಿದಿರುವ ಕಿವೀಸ್ ಪಡೆ ಭರ್ಜರಿ ಆರಂಭವನ್ನೇ ಪಡೆದಿದ್ದು ಕೇವಲ 10 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 80 ರನ್ ಗಳಿಸಿದೆ.
3ನೇ ಪಂದ್ಯದ ಸೋಲಿನ ಒತ್ತಡದಲ್ಲಿರುವ ವಿಲಿಯಮ್ಸನ್ ಪಡೆಗೆ ಸರಣಿ ಜೀವಂತವಾಗಿರಿಸಿಕೊಳ್ಳಲು ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿದೆ. ಆದರೆ ಭಾರತ ತಂಡ ಈಗಾಗಲೇ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಈ ಪಂದ್ಯವನ್ನು ಗೆದ್ದರೆ ಸರಣಿಯನ್ನು ಕೈವಶ ಮಾಡಿಕೊಳ್ಳಲಿದೆ. ಕಳೆದ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಅಜೇಯ154 ರನ್ ಸಿಡಿಸಿದ ಕೊಹ್ಲಿ ಮತ್ತು 80 ರನ್ ಸಿಡಿಸಿದ್ದ ಧೋನಿ ಕಿವೀಸ್ ಪಡೆಗೆ ಮಾರಕವಾಗಬಲ್ಲರು.
ಧೋನಿಗೆ ರಾಂಚಿ ತವರು ಜಿಲ್ಲೆಯಾದ್ದರಿಂದ ತವರು ಅಭಿಮಾನಿಗಳ ಬೆಂಬಲವಿದೆ. ಹಾಗೆಯೇ ಕೊಹ್ಲಿ ರಾಂಚಿ ಪಿಚ್ ಅದೃಷ್ಟದ ಪಿಚ್ ಆಗಿದ್ದು, ಈ ಹಿಂದೆ ಇದೇ ಪಿಚ್ ನಲ್ಲಿ ಕೊಹ್ಲಿ ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇಂಗ್ಲೆಂಡ್ ವಿರುದ್ಧ ಇದೇ ಕ್ರೀಡಾಂಗಣದಲ್ಲಿ ಅಜೇಯ 77 ರನ್ ಭಾರಿಸಿದ್ದ ಕೊಹ್ಲಿ, ಶ್ರೀಲಂಕಾ ವಿರುದ್ಧ ಚೇಸಿಂಗ್ 139 ರನ್ ಗಳಿಸಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.