ನವದೆಹಲಿ: ಇತ್ತೀಚೆಗಷ್ಟೇ ಕೊನೆಗೊಂಡ ಭಾರತ ಮತ್ತು ಆಸ್ಟ್ರೇಲಿಯಾ ನಡುವಿವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ದಾಖಲೆಯೊಂದಕ್ಕೆ ಸಾಕ್ಷಿಯಾಗಿದ್ದು, ಸರಣಿಯನ್ನು ವಿಶ್ವಾದ್ಯಂತ ದಾಖಲೆ ಪ್ರಮಾಣದ ವೀಕ್ಷಕರು ನೋಡಿದ್ದಾರೆ ಎಂದು ತಿಳಿದುಬಂದಿದೆ.
ಖ್ಯಾತ ಬ್ರಾಡ್ ಕಾಸ್ಟಿಂಗ್ ವಿಶ್ಲೇಷಣಾ ಸಂಸ್ಥೆ ಬಿಎಆರ್ ಸಿ (ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಇಂಡಿಯಾ) ವಿಶ್ಲೇಷಿಸಿರುವಂತೆ ಬಾರ್ಡರ್-ಗವಾಸ್ಕರ್ ಸರಣಿಯನ್ನು ಸ್ಟಾರ್ ಸ್ಪೋರ್ಟ್ಸ್ ಟಿವಿ ಚಾನೆಲ್‌ಗಳಲ್ಲಿ ಒಟ್ಟು 110 ಕೋಟಿ ಜನರು ವೀಕ್ಷಿಸಿದ್ದಾರೆ. ಅಂತೆಯೇ ಆ ಸರಣಿಯ ಹೈವೋಲ್ಟೇಜ್ ಪಂದ್ಯವಾಗಿದ್ದ ಹಿಮಾಚಲ ಪ್ರದೇಶದಲ್ಲಿ ನಡೆದ ಮೂರನೇ ಪಂದ್ಯವನ್ನು ಅತಿ ಹೆಚ್ಚು ಸಂಖ್ಯೆಯ ಅಂದರೆ 38.3 ಕೋಟಿ ಜನ ವೀಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ. "ಐತಿಹಾಸಿಕ ದಾಖಲೆಯಾಗಿದ್ದು, ಇಲ್ಲಿಯವರೆಗೆ ನಡೆಸಿದ ಸಮೀಕ್ಷೆಗಳಲ್ಲಿ ಇದು ವಿಶಿಷ್ಟ ವಾದದ್ದು ಎಂದು ಸ್ಟಾರ್ ಸ್ಪೋರ್ಟ್ಸ್ ಹೇಳಿದೆ.
2017ರಲ್ಲಿ ಭಾರತದಲ್ಲಿ ನಡೆದ ಮೊದಲ ತವರಿನ ಸರಣಿ ಇದಾಗಿದ್ದು, ನಾಲ್ಕು ಪಂದ್ಯಗಳ ಸರಣಿಯನ್ನು ಭಾರತ ತಂಡವು 2–1ರಿಂದ ಗೆದ್ದಿತ್ತು. ಇದಕ್ಕೂ ಮುನ್ನ ನಡೆದಿದ್ದ ಭಾರತ ಮತ್ತು ಇಂಗ್ಲೆಂಡ್ ಏಕದಿನ ಕ್ರಿಕೆಟ್ ಸರಣಿಯನ್ನು ವೀಕ್ಷಿಸಿದವರ ಸಂಖ್ಯೆಯು ಕಳೆದ ಐದು ವರ್ಷಗಳ ದಾಖಲೆಗಳನ್ನು ಅಳಿಸಿಹಾಕಿತ್ತು. ಸ್ಟಾರ್ ಸ್ಪೋರ್ಟ್ಸ್ ವಾಹಿನಿಯು ಇಂಗ್ಲಿಷ್ ಮತ್ತು ಹಿಂದಿ ವಾಹಿನಿ ಎರಡರಲ್ಲೂ ಪಂದ್ಯಗಳನ್ನು ನೇರ ಪ್ರಸಾರ ಮಾಡಲಾಗಿತ್ತು.