ಕೊಲಂಬೋ: ಭಾರತದ ವಿರುದ್ಧ ಗುರುವಾರ ಕೊಲಂಬೋದಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯ ಶ್ರೀಲಂಕಾ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ಆಟವಾಗಿ ದಾಖಲಾಗಿದ್ದು, ಶ್ರೀಲಂಕಾ ತಂಡ ಯಾವುದೇ ತಂಡದ ಎದುರು ತವರಿನಲ್ಲಿ ಅತೀ ದೊಡ್ಡ ರನ್ ಗಳ ಅಂತರದಲ್ಲಿ ಸೋತ ಪಂದ್ಯ ಇದಾಗಿದೆ.
ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡ ಭಾರತದ ಎದುರು 168 ರನ್ ಗಳ ಅಂತರದಿಂದ ಸೋತಿದ್ದು, ಇದು ಶ್ರೀಲಂಕಾ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ಆಟವಾಗಿ ದಾಖಲಾಗಿದೆ. ಈ ಹಿಂದೆ ಶ್ರೀಲಂಕಾ ತಂಡ ತವರಿನಲ್ಲಿ ಇದೇ ಭಾರತ ತಂಡದ ಎದುರು 2009ರಲ್ಲಿ 147 ರನ್ ಗಳ ಅಂತರದಲ್ಲಿ ಸೋತಿತ್ತು. ಅಂತೆಯೇ 2009ರಲ್ಲಿ ಪಾಕಿಸ್ತಾನದ ವಿರುದ್ಧ 146 ರನ್ ಗಳ ಅಂತರದಲ್ಲಿ ಮತ್ತು 2015ರಲ್ಲಿ ಮತ್ತೆ ಪಾಕಿಸ್ತಾನದ ವಿರುದ್ಧ 135 ರನ್ ಗಳ ಅಂತರದಲ್ಲಿ ಸೋತಿದ್ದು,ಈ ವರೆಗಿನ ಶ್ರೀಲಂಕಾದ ಕಳಪೆ ಆಟವಾಗಿ ದಾಖಲಾಗಿದೆ.
ಇನ್ನು ಭಾರತ ತಂಡ ಶ್ರೀಲಂಕಾ ತಂಡವನ್ನು ಈ ಹಿಂದೆ 2003ರಲ್ಲಿ ಜೋಹನ್ಸ್ ಬರ್ಗ್ ನಲ್ಲಿ ಅತೀ ಹೆಚ್ಚು ರನ್ ಗಳ ಅಂತರ ಅಂದರೆ 183 ರನ್ ಗಳ ಅಂತರದಲ್ಲಿ ಮಣಿಸಿತ್ತು. ಇದಾ ಬಳಿಕ ಕಟಕ್ ನಲ್ಲಿ 2014ರಲ್ಲಿ 169 ರನ್ ಗಳಿಂದ ಮಣಿಸಿತ್ತು.
ಒಟ್ಟಾರೆ ಭಾರತದ ಎದುರಿನ ಸರಣಿಯುದ್ದಕ್ಕೂ ಕಳಪೆ ಪ್ರದರ್ಶನ ತೋರುತ್ತಿರುವ ಶ್ರೀಲಂಕಾ ತಂಡಕ್ಕೆ ಒಂದು ಉತ್ತಮ ಗೆಲುವು ಅನಿವಾರ್ಯವಾಗಿದೆ. ಇನ್ನು 5 ಪಂದ್ಯಗಳ ಸರಣಿಯನ್ನು ಭಾರತ ಈಗಾಗಲೇ ಗೆದ್ದಿದ್ದು, ಗೆಲುವಿನ ಅಂತರ ಇದೀಗ 4-0 ಗೇರಿದೆ. ಇನ್ನುಳಿದ ಏಕೈಕ ಪಂದ್ಯವನ್ನೂ ಗೆದ್ದು ಸಿಂಹಳೀಯರನ್ನು ವೈಟ್ ವಾಶ್ ಮಾಡುವ ತವಕದಲ್ಲಿ ಭಾರತವಿದ್ದರೆ, ಉಳಿದಿರುವ ಐಕೈಕ ಪಂದ್ಯದಲ್ಲಾದರೂ ಗೆಲುವು ಸಾಧಿಸಿ ಮಾನ ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿ ಶ್ರೀಲಂಕಾ ತಂಡವಿದೆ.