ಸೌರವ್ ಗಂಗೂಲಿ ಹಾಗೂ ಅನಿಲ್ ಕುಂಬ್ಳೆ
ಮುಂಬೈ: ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಲ್ಲಿ ಸೌರವ್ ಗಂಗೂಲಿ ಕೂಡ ಒಬ್ಬರು.. ಇಂತಹ ಗಂಗೂಲಿ ನಮ್ಮ ಕನ್ನಡಿಗ ಅನಿಲ್ ಕುಂಬ್ಳೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ತಮ್ಮ ನಾಯಕತ್ವವನ್ನೇ ಪಣಕ್ಕಿಟ್ಟಿದ್ದ ಘಟನೆ ಇದೀಗ ಬೆಳಕಿಗೆಬಂದಿದೆ.
2003-04ರ ಆಸೀಸ್ ಪ್ರವಾಸಕ್ಕಾಗಿ ಗಂಗೂಲಿ ಅನಿಲ್ ಕುಂಬ್ಳೆ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಪಟ್ಟು ಬಿಡದೇ ಕುಳಿತಿದ್ದರಂತೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸ್ವತಃ ಅವರೇ ಈ ಬಗ್ಗೆ ಇತಿಹಾಸವನ್ನು ಮೆಲುಕು ಹಾಕಿದ್ದು, ಅನಿಲ್ ಕುಂಬ್ಳೆಯನ್ನು ತಂಡದಲ್ಲಿ ಉಳಿಸಿಕೊಳ್ಳಲು ತಾವು ನಾಯಕತ್ವವನ್ನೇ ಪಣವಾಗಿಟ್ಟ ಘಟನೆಯನ್ನು ಕಾರ್ಯಕ್ರಮವೊಂದರಲ್ಲಿ ವಿವರಿಸಿದ್ದಾರೆ.
2003-04ರ ಆಸೀಸ್ ಪ್ರವಾಸಕ್ಕೆ ಕುಂಬ್ಳೆಯನ್ನು ಆಯ್ಕೆ ಮಾಡಲು ಬಿಸಿಸಿಐ ಸುತಾರಾಂ ಸಿದ್ಧವಿರಲಿಲ್ಲ..ಆದರೆ ಗಂಗೂಲಿ ತನ್ನ ನಾಯಕತ್ವವನ್ನೇ ಪಣವಾಗಿಟ್ಟ ಪರಿಣಾಮ ಮುಂದೆ ಕುಂಬ್ಳೆ ಆಯ್ಕೆಯಾಗಿದ್ದು ಮಾತ್ರವಲ್ಲ ವಿಶ್ವ ದಾಖಲೆಯನ್ನೂ ನಿರ್ಮಿಸಿದ್ದರು ಎಂದು ಗಂಗೂಲಿ ಹೇಳಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಗಂಗೂಲಿ ಹೇಳಿರುವಂತೆ, "2003-04ರ ಆಸ್ಟ್ರೇಲಿಯಾ ಪ್ರವಾಸ ಅತ್ಯಂತ ಕಠಿಣವಾಗಿತ್ತು. ಬಲಗೈ ಲೆಗ್ ಸ್ಪಿನ್ನರ್ ಗೆ ಆಸ್ಟ್ರೇಲಿಯನ್ನರು ಉತ್ತಮವಾಗಿ ಆಡುತ್ತಾರೆ, ಆದ್ದರಿಂದ ಎಡಗೈ ಲೆಗ್ ಸ್ಪಿನ್ನರನ್ನು ಆಯ್ಕೆ ಮಾಡಲು ಬಿಸಿಸಿಐ ಆಯ್ಕೆ ಸಮಿತಿ ಮುಂದಾಗಿತ್ತು. ಆದರೆ ಇದನ್ನು ಗಂಗೂಲಿ ವಿರೋಧಿಸಿದ್ದರು. ಕುಂಬ್ಳೆಯನ್ನು ತಂಡಕ್ಕೆ ಸೇರಿಸಿಕೊಳ್ಳಲೇಬೇಕು ಎಂದು ಪಟ್ಟು ಹಿಡಿದರು. ಸತತ 2 ಗಂಟೆಯಾದರೂ ವಿಷಯ ಬಗೆ ಹರಿಯದಾಗ ಅಂದು ಕೋಚ್ ಆಗಿದ್ದ ಜಾನ್ ರೈಟ್ ಮಧ್ಯಪ್ರವೇಶಿಸಿ, ಬಿಟ್ಟುಬಿಡಿ ಅವರು ಕೊಟ್ಟ ತಂಡದೊಂದಿಗೆ ಆಡೋಣ ಎಂದು ಸೌರವ್ ಗೆ ಹೇಳಿದರಂತೆ. ಆದರೆ ಈಗ ಕುಂಬ್ಳೆಯನ್ನು ಬಿಟ್ಟುಬಿಟ್ಟರೆ ಅವರು ಮತ್ತೆಂದೂ ಭಾರತ ತಂಡವನ್ನು ಪ್ರವೇಶಿಸುವುದಿಲ್ಲವೆಂದು ಗಂಗೂಲಿಗೆ ಅನಿಸಿತು. ಆದ್ದರಿಂದ ಕುಂಬ್ಳೆಯನ್ನು ತಂಡಕ್ಕೆ ಸೇರಿಸಿಕೊಳ್ಳದಿದ್ದರೆ ತಂಡದ ಪಟ್ಟಿಗೆ ಸಹಿ ಹಾಕಲು ಸಾಧ್ಯವೇ ಇಲ್ಲ ಎಂದು ಅವರು ತಮ್ಮ ಹಠವನ್ನು ಮುಂದುವರಿಸಿದರಂತೆ.
ಗಂಗೂಲಿ ಹಠದ ಬಗ್ಗೆ ಪರಿಚಯವಿದ್ದ ಆಯ್ಕೆ ಮಂಡಳಿ ಸದಸ್ಯರು, ಕಡೆಗೂ ಗಂಗೂಲಿ ಅವರಿಗೆ ಮಣಿದು ಕುಂಬ್ಳೆಯನ್ನು ತಂಡಕ್ಕೆ ಸೇರಿಸಿಕೊಂಡರು. ಆದರೆ ಅದಕ್ಕೊಂದು ಕಠಿಣ ಷರತ್ತನ್ನೂ ವಿಧಿಸಿದ್ದರು. ಒಂದು ವೇಳೆ ಕುಂಬ್ಳೆ ಆ ಸರಣಿಯಲ್ಲಿ ವಿಫಲರಾದರೆ, ಭಾರತ ತಂಡ ವಿಫಲರಾದರೆ ಮೊದಲನೇ ಬಲಿಪಶು ನೀವೇ ಆಗುತ್ತೀರಿ ಗಂಗೂಲಿಗೆ ಎಚ್ಚರಿಸಿದ್ದರಂತೆ. ಇದಕ್ಕೆ ಗಂಗೂಲಿ ತಲೆಯಾಡಿಸಿ ಎದ್ದು ಹೊರಬಂದರು. ಮುಂದೆ ನಡೆದಿದ್ದು ಇತಿಹಾಸ.
ಅಂದು ಆ ಸರಣಿಯನ್ನು ಭಾರತ 1-1ರಿಂದ ಡ್ರಾ ಮಾಡಿಕೊಂಡು ಐತಿಹಾಸಿಕ ಸಾಧನೆ ಮಾಡಿತು. ಈ ಸರಣಿಯಲ್ಲಿ ಅತಿಹೆಚ್ಚು ಅಂದರೆ 24 ವಿಕೆಟ್ ಪಡೆದ ಬೌಲರ್ ಆಗಿ ಕುಂಬ್ಳೆ ಮೂಡಿಬಂದರು. ಅಷ್ಟು ಮಾತ್ರವಲ್ಲ ಆ ವರ್ಷದಲ್ಲಿ 80 ವಿಕೆಟ್ ಪಡೆದು, ವರ್ಷವೊಂದರಲ್ಲಿ ಗರಿಷ್ಠ ವಿಕೆಟ್ ಪಡೆದ ವಿಶ್ವದಾಖಲೆ ನಿರ್ಮಿಸಿದರು.
ಗಂಗೂಲಿ ಇದೇ ರೀತಿ ಹಲವು ಆಟಗಾರರನ್ನು ತಮ್ಮ ನಾಯಕತ್ವದಲ್ಲಿ ರಕ್ಷಿಸಿದ್ದಾರೆ. ಆ ಆಟಗಾರರೆಲ್ಲರೂ ಅದ್ಭುತ ರೀತಿಯಲ್ಲಿ ಗಂಗೂಲಿಯ ತೀರ್ಮಾನವನ್ನು ಸಮರ್ಥಿಸಿದ್ದಾರೆನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅಷ್ಟುಮಾತ್ರವಲ್ಲ ಈ ಹಿಂದೆ ಟೀಂ ಇಂಡಿಯಾ ಕೋಚ್ ಆಯ್ಕೆ ವಿಚಾರದ ಸಂದರ್ಭದಲ್ಲಿಯೂ ಟೀಂ ಇಂಡಿಯಾ ಸಲಹೆಗಾರರಾಗಿರುವ ಸೌರವ್ ಗಂಗೂಲಿ ನೇರವಾಗಿಯೇ ಕುಂಬ್ಳೆ ಬೆನ್ನಿಗೆ ನಿಂತಿದ್ದು ಮಾತ್ರವಲ್ಲದೇ ಅವರನ್ನು ಟೀಂ ಇಂಡಿಯಾ ಕೋಚ್ ಆಗಿ ಆಯ್ಕೆ ಮಾಡಲು ಪ್ರಮುಖ ಪಾತ್ರವಹಿಸಿದ್ದರು. ಈ ಸಂದರ್ಭದಲ್ಲಿ ಹಾಲಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಕುಂಬ್ಳೆಗೆ ತೀವ್ರ ಪೈಪೋಟಿ ಒಡ್ಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics