ಮುಂಬೈ: ಭಾರತದ ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಜೀವನಾಧಾರಿತ ಚಿತ್ರ "ಸಚಿನ್: ಎ ಬಿಲಿಯನ್ ಡ್ರೀಮ್ಸ್ ಚಿತ್ರ" ಇದೇ ಮೇ 26ರಂದು ತೆರೆಕಾಣಲಿದೆ.
ಕ್ರಿಕೆಟ್ ಧರ್ಮವಾಗಿರುವ ಭಾರತದಲ್ಲಿ ಕ್ರಿಕೆಟ್ ದೇವರಾದ ಸಚಿನ್ ತೆಂಡೂಲ್ಕರ್ ಅವರ ಜೀವನಾಧಾರಿತ ಚಿತ್ರಕ್ಕೆ ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದು, ಈ ಕುತೂಹಲಕ್ಕೆ ಶೀಘ್ರದಲ್ಲೇ ಬ್ರೇಕ್ ಬೀಳಲಿದೆ. ನಾಲ್ಕು ವರ್ಷಗಳ ಹಿಂದೆ ಕ್ರಿಕೆಟ್ ಗೆ ವಿದಾಯ ಹೇಳಿದ್ದ ಸಚಿನ್ ತೆಂಡೂಲ್ಕರ್ ಮತ್ತೆ ಬ್ಯಾಟ್ ಹಿಡಿದು ಬೌಲರ್ ಗಳನ್ನು ದಂಡಿಸುವುದನ್ನು ಅವರ ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು. ಆದರೆ ಈ ಬಾರಿ ಕ್ರೀಡಾಂಗಣದಲ್ಲಿ ಅಲ್ಲ. ಬದಲಿಗೆ ಚಿತ್ರಮಂದಿರದಲ್ಲಿ. ಹೌದು.. ಸಚಿನ್ ತೆಂಡೂಲ್ಕರ್ ಅವರ ಜೀವನಾಧಾರಿತ ಚಿತ್ರ "ಸಚಿನ್: ಎ ಬಿಲಿಯನ್ ಡ್ರೀಮ್ಸ್ ಚಿತ್ರ" ಇದೇ ಮೇ 26ರಂದು ತೆರೆಕಾಣಲಿದೆ.
ಈ ಬಗ್ಗೆ ಸ್ವತಃ ಮಾಸ್ಟರ್ ಬ್ಲಾಸ್ಟರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದು, ಮೇ 26ರಂದು ಸಚಿನ್ ಚಿತ್ರ ತೆರೆಕಾಣಲಿದೆ ಎಂದು ತಿಳಿಸಿದ್ದಾರೆ.
ಸಚಿನ್ ಅವರ ಜೀವನಾಧಾರಿತ ಚಿತ್ರವನ್ನು ಸುಮಾರು 5 ದೇಶಗಳಲ್ಲಿ ಸತತ 30 ತಿಂಗಳು ಕಾಲ ಚಿತ್ರೀಕರಿಸಲಾಗಿದೆ. ಚಿತ್ರವನ್ನು ಜೇಮ್ಸ್ ಇರಸ್ಕಿನ್ ಅವರು ನಿರ್ದೇಶಿಸಿದ್ದು, ರವಿ ಭಾಗ್ಚಂದಕ ಅವರು ಚಿತ್ರ ನಿರ್ಮಾಣ ಮಾಡಿದ್ದಾರೆ.