ಪುಣೆ: ವಿವಿಧ ಕಾಲಾನುಕ್ರಮದಲ್ಲಿ ಬಲಾಢ್ಯ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿರುವ ಸಚಿನ್ ತೆಂಡೂಲ್ಕರ್ ಅವರು ವಿರಾಟ್ ಕೊಹ್ಲಿಗಿಂತಲೂ ಉತ್ತಮ ಎಂದು ಟೀಂ ಇಂಡಿಯಾ ಆಟಗಾರ ಹರ್ಭಜನ್ ಸಿಂಗ್ ಹೇಳಿದ್ದಾರೆ.
ಖಾಸಗಿ ಕ್ರೀಡಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹರ್ಭಜನ್ ಸಿಂಗ್, ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಅವರ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಕೊಹ್ಲಿ ತೀವ್ರವಾದ ಕ್ರಿಕೆಟ್ ಆಡುತ್ತಾರೆ. ಕೊಹ್ಲಿ ಜವಾಬ್ದಾರಿ ಹೊರುವುದು ಇಷ್ಟ ಅಂತೆಯೇ ಅದನ್ನೇ ಇಡೀ ತಂಡದಿಂದ ನಿರೀಕ್ಷಿಸುತ್ತಾರೆ. ಆದರೆ ಸಚಿನ್ ತೆಂಡೂಲ್ಕರ್ ಅವರು ವಿವಿಧ ಕಾಲಾನು ಕ್ರಮದಲ್ಲಿ ಬಲಾಢ್ಯ ಮತ್ತು ಶ್ರೇಷ್ಠ ಬೌಲರ್ ಗಳನ್ನು ಎದುರಿಸಿದ್ದಾರೆ. ಹೀಗಾಗಿ ಇಬ್ಬರ ನಡುವೆ ಹೋಲಿಕೆ ಮಾಡುವುದು ಸರಿಯಲ್ಲ. ಆದರೂ ಕೊಹ್ಲಿ ಮತ್ತು ಸಚಿನ್ ಆಯ್ಕೆ ಕೊಟ್ಟರೆ ಖಂಡಿತಾ ನಾನು ಸಚಿನ್ ತೆಂಡೂಲ್ಕರ್ ಅವರನ್ನು ಆಯ್ಕೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಶ್ರೇಷ್ಠ ಬೌಲಿಂಗ್ ಹಾಗೂ ಪ್ರಭಾವಿ ಬೌಲರ್ ಗಳು ಸಿಗುತ್ತಿಲ್ಲ. ಬೌಲಿಂಗ್ ಪ್ರಮಾಣ ಕುಸಿದಿದೆ. ಟಿ20 ಕ್ರಿಕೆಟ್ ಆವಿಷ್ಕಾರದ ಬಳಿಕವಂತೂ ಬೌಲಿಂಗ್ ನ ಸ್ಟ್ಯಾಂಡರ್ಡ್ಸ್ ಮತ್ತಷ್ಟು ಕುಸಿದಿದೆ, ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಕ್ವಾಲಿಟಿ ಬೌಲಿಂಗ್ ಎನ್ನುವುದು ನಾಪತ್ತೆಯಾಗಿದೆ. ಹೀಗಾಗಿ ಕೊಹ್ಲಿಗಿಂತ ಸಚಿನ್ ತೆಂಡೂಲ್ಕರ್ ಉತ್ತಮ ಬ್ಯಾಟ್ಸಮನ್ ಎಂಬುದು ನನ್ನ ಅಭಿಪ್ರಾಯ ಎಂದು ಹರ್ಭಜನ್ ಹೇಳಿದ್ದಾರೆ.
ವಿದೇಶಿ ಪಿಚ್ ಗಳಲ್ಲಿ 30-35 ಓವರ್ ಗಳಲ್ಲಿ 2 ವಿಕೆಟ್ ಪಡೆಯುವುದೇ ದೊಡ್ಡ ಸಾಧನೆ. ಇಂತಹ ಪರಿಸ್ಥಿತಿಯಲ್ಲಿ ಕ್ವಾಲಿಟಿ ಬೌಲಿಂಗ್ ಎನ್ನುವುದು ಕಾಣದಾಗುತ್ತಿದೆ. ಮೊದಲು ಬೌಲರ್ ಗಳ ಯೋಚನಾ ಲಹರಿ ಬದಲಾಗಬೇಕು. ಟಿ20 ಬಳಿಕ ಮನರಂಜನೆಯ ಉದ್ದೇಶದಿಂದ ಬೌಂಡರಿ ಲೈನ್ ಅನ್ನು ತೀರಾ ಹತ್ತಿರಕ್ಕೆ ಇಡಲಾಗುತ್ತಿದೆ. ಇದರಿಂದ ಅನಗತ್ಯವಾಗಿ ರನ್ ಗಳು ಹರಿಯುತ್ತಿವೆ ಎಂದು ಓರ್ವ ಬೌಲರ್ ಆಗಿ ಹರ್ಭಜನ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.