ಮುಂಬೈ: ಟೀಂ ಇಂಡಿಯಾ ಮೊದಲ ವಿಶ್ವಕಪ್ ಗೆದ್ದ ತಂಡದ ನಾಯಕ ಕಪಿಲ್‌ದೇವ್‌ರನ್ನು ತಂಡದಿಂದ ಕೈಬಿಡಲು ನಾನು ಕಾರಣನಲ್ಲ ಎಂದು ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ಹೇಳಿದ್ದಾರೆ.
1983ರ ವಿಶ್ವಕಪ್ ಟೂರ್ನಿ ವೇಳೆ ಕಪಿಲ್ ದೇವ್ ಅವರು ಭಾರತ ತಂಡದ ನಾಯಕತ್ವ ವಹಿಸಿದ್ದರು. ಇದಾದ ಬಳಿಕ 1985 ರಲ್ಲಿ ಈಡನ್ ಗಾರ್ಡನ್ ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಿಂದ ಕಪಿಲ್ ದೇವ್ ರನ್ನು ತಂಡದಿಂದ ಕೈಬಿಡಲಾಗಿತ್ತು. ಈ ವೇಳೆ ತಂಡದ ನಾಯಕನಾಗಿದ್ದವರು ಸುನೀಲ್ ಗವಾಸ್ಕರ್. ಸುನೀಲ್ ಅವರೇ ಕಪಿಲ್ ದೇವ್ ರನ್ನು ತಂಡದಿಂದ ಕೈಬಿಡುವಂತೆ ಮಾಡಿದ್ದಾರೆ ಎಂಬ ಆರೋಪ ಅವರ ಮೇಲಿದ್ದು, ಇದಕ್ಕೆ ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ.
ಹಾಲ್ ಆಫ್ ಫೇಮ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಮ್ಮ ಮೇಲಿನ ಆರೋಪವನ್ನು ತಗ್ಗಿಸುವ ಪ್ರಯತ್ನ ಮಾಡಿದ್ದಾರೆ. ಕಪಿಲ್ ರನ್ನು ಹೊರಹಾಕುವಂತಹ ನಿರ್ಧಾರ ನಾನು ತೆಗೆದುಕೊಂಡಿದ್ದಲ್ಲ, ಇತರೇ ಆಟಗಾರರ ಅಭಿಪ್ರಾಯ ಸಂಗ್ರಹಿಸಿ ಸಮಿತಿ ಈ ಕ್ರಮ ತೆಗೆದುಕೊಂಡಿದೆ ಎಂದು ಗವಾಸ್ಕರ್ ಹೇಳಿದ್ದಾರೆ.