2ನೇ ಟೆಸ್ಟ್‌ನಿಂದಲೂ ಸಿರಾಜ್‌ಗೆ ಕೊಕ್; 'ಇದು ಒಳ್ಳೆಯ ರೀತಿ ಅಂತ್ಯವಾಗಲ್ಲ' ಎಂದು ಎಚ್ಚರಿಸಿದ ಆರ್. ಅಶ್ವಿನ್!

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ 2ನೇ ಪಂದ್ಯದಲ್ಲೂ ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿಲ್ಲ. ಟೀಮ್ ಇಂಡಿಯಾದ ಈ ನಿರ್ಧಾರಕ್ಕೆ ಮಾಜಿ ಕ್ರಿಕೆಟಿಗರು ಅಚ್ಚರಿ ವ್ಯಕ್ತಪಡಿಸಿದ್ದು, ಇದೀಗ ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಸಿರಾಜ್ ಪರವಾಗಿ ಧ್ವನಿ ಎತ್ತಿದ್ದಾರೆ.
ಸಿರಾಜ್ ಅವರನ್ನು ನಿರಂತರವಾಗಿ ಬೆಂಚ್ ಕಾಯಿಸುತ್ತಿರುವುದು ಅವರ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರಬಹುದು ಎಂದು ಅಶ್ವಿನ್ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಂಡದ ಆಡಳಿತ ಮಂಡಳಿಯ ಈ ನಿರ್ಧಾರ ಸಿರಾಜ್ ಪಾಲಿಗೆ ಒಳ್ಳೆಯ ರೀತಿಯಲ್ಲಿ ಅಂತ್ಯವಾಗುವಂತೆ ಕಾಣುತ್ತಿಲ್ಲ ಎಂದು ಎಚ್ಚರಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸಿರಾಜ್ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. 11 ಪಂದ್ಯಗಳಿಂದ 43 ವಿಕೆಟ್ ಕಬಳಿಸಿದ್ದಾರೆ.
2025ರ ಮಧ್ಯಭಾಗದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಸರಣಿಯನ್ನು ಭಾರತ 2-2ರಲ್ಲಿ ಡ್ರಾ ಮಾಡಿಕೊಳ್ಳುವಲ್ಲಿ ಸಿರಾಜ್ ಪ್ರಮುಖ ಪಾತ್ರ ವಹಿಸಿದ್ದರು. ಇಷ್ಟೆಲ್ಲಾ ಉತ್ತಮ ಪ್ರದರ್ಶನ ನೀಡಿದ್ದರೂ ನ್ಯೂಜಿಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲೂ ಅವರಿಗೆ ಅವಕಾಶ ಸಿಕ್ಕಿಲ್ಲ.
'ಸಿರಾಜ್‌ಗೆ ಯಾರಾದರೂ ಮಾರ್ಗದರ್ಶನ ನೀಡಬೇಕು'
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಅಶ್ವಿನ್, ಸಿರಾಜ್ ಅವರ ಪರಿಸ್ಥಿತಿಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. "ತಂಡದ ಆಡಳಿತ ಮಂಡಳಿಯಿಂದ ಬರುತ್ತಿರುವ ಸಂದೇಶವನ್ನು ಗಮನಿಸಿದರೆ, ಸಿರಾಜ್ ಆಡುವ ಹನ್ನೊಂದರ ಬಳಗಕ್ಕೆ ಸೂಕ್ತ ಆಟಗಾರನಲ್ಲ ಎಂಬಂತಿದೆ. ವೇಗದ ಬೌಲರ್‌ಗಳ ಆಯ್ಕೆಯಲ್ಲಿ ಈಗ ಅವರು ನಿತೀಶ್ ಕುಮಾರ್ ರೆಡ್ಡಿಗಿಂತಲೂ ಹಿಂದೆ ಉಳಿದಿರುವಂತೆ ಕಾಣುತ್ತಿದೆ.
ಈ ಸಂದರ್ಭದಲ್ಲಿ ಸಿರಾಜ್ ಮಾನಸಿಕವಾಗಿ ತುಂಬಾ ಕುಗ್ಗಿರಬಹುದು. ಯಾರಾದರೂ ಅವರೊಂದಿಗೆ ಮಾತನಾಡಿ, ಅವರ ಅಸಮಾಧಾನವನ್ನು ವ್ಯಕ್ತಪಡಿಸಲು ಅವಕಾಶ ನೀಡಿ, ಮುಂದಿನ ಹಾದಿಯ ಬಗ್ಗೆ ಮಾರ್ಗದರ್ಶನ ನೀಡಬೇಕು. ಸಿರಾಜ್ ಪಾಲಿಗೆ ಇದು ಒಳ್ಳೆಯ ರೀತಿಯಲ್ಲಿ ಅಂತ್ಯವಾಗುತ್ತದೆ ಎಂದು ನನಗೆ ಅನಿಸುತ್ತಿಲ್ಲ" ಎಂದು ಅಶ್ವಿನ್ ಹೇಳಿದ್ದಾರೆ.
"ಬೇರೆ ಸ್ಥಳದಲ್ಲಿ ಅದೇ ಘಟನೆ ಮರುಕಳಿಸಿದೆ. ಬದಲಾವಣೆಯಾಗಿರುವುದು ಸ್ಥಳ ಮಾತ್ರ. ಸಿರಾಜ್ ಭಾವನಾತ್ಮಕ ವ್ಯಕ್ತಿ. ಹೀಗಾಗಿ ಅವರ ಪರಿಸ್ಥಿತಿ ಕಂಡು ಬೇಸರವಾಗುತ್ತಿದೆ. ಇಂದು ಸಿರಾಜ್ ಆಗಿರಬಹುದು, ನಾಳೆ ಬೇರೊಬ್ಬ ಆಟಗಾರನಿಗೂ ಇದೇ ಪರಿಸ್ಥಿತಿ ಬರಬಹುದು. ತಂಡದಲ್ಲಿ ನಿಜವಾದ ಅನಿಶ್ಚಿತತೆ ಸೃಷ್ಟಿಯಾಗುತ್ತಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡಕ್ಕೆ ಏಳನೇ ವೇಗದ ಬೌಲರ್ ಆಗಿ ಗೌರ್ನೂರ್ ಬ್ರಾರ್ ಆಯ್ಕೆಯಾಗಿದ್ದರ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಆಗಲೇ ಎರಡನೇ ಟೆಸ್ಟ್‌ನಲ್ಲೂ ಸಿರಾಜ್‌ಗೆ ಅವಕಾಶ ಸಿಗುವುದಿಲ್ಲ ಎಂಬುದು ತಮಗೆ ಅರ್ಥವಾಗಿತ್ತು ಎಂದು ಅಶ್ವಿನ್ ಹೇಳಿದ್ದಾರೆ.
ಮುಂದಿನ ಅವಕಾಶದಲ್ಲಿ 5 ವಿಕೆಟ್ ಪಡೆಯಲೇಬೇಕು!
ತಂಡದಲ್ಲಿ ಮತ್ತೆ ಸ್ಥಾನ ಪಡೆಯಬೇಕಾದರೆ ಸಿರಾಜ್ ಅಸಾಧಾರಣ ಪ್ರದರ್ಶನ ನೀಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಶ್ವಿನ್ ಹೇಳಿದ್ದಾರೆ.
"ಸಿರಾಜ್ ಮುಂದೆ ಈಗ ಬೇರೆ ಆಯ್ಕೆಯೇ ಇಲ್ಲ. ಮುಂದಿನ ಅವಕಾಶ ಸಿಕ್ಕಾಗ ಗಂಟೆಗೆ 145 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ, ಐದು ವಿಕೆಟ್‌ಗಳ ಗೊಂಚಲು ಪಡೆಯಬೇಕಾಗಿದೆ. ತಂಡದ ಆಡಳಿತ ಮಂಡಳಿ ಹಿಂದಿನ ಸಾಧಕರನ್ನು ಸಂಪೂರ್ಣವಾಗಿ ಬದಿಗಿಟ್ಟು ಮುಂದುವರಿಯಲು ನಿರ್ಧರಿಸಿದಂತೆ ಕಾಣುತ್ತಿದೆ. ಸಿರಾಜ್ ಪಾಲಿಗೆ ಇದು ಸುಲಭವಾದ ಅಂತ್ಯವಾಗುವುದಿಲ್ಲ" ಎಂದು ಅಶ್ವಿನ್ ಹೇಳಿದ್ದಾರೆ.
ಸಿರಾಜ್ ಭಾವುಕ; ರಹಾನೆ, ಮುರಳಿ ಕಾರ್ತಿಕ್ ಹೇಳಿದ್ದೇನು?
2ನೇ ಟೆಸ್ಟ್ ಪಂದ್ಯದಿಂದಲೂ ಸಿರಾಜ್ ಅವರನ್ನು ಹೊರಗಿಟ್ಟಿರುವ ಬಗ್ಗೆ ಮಾಜಿ ಕ್ರಿಕೆಟಿಗರಾದ ಅಜಿಂಕ್ಯ ರಹಾನೆ ಮತ್ತು ಮುರಳಿ ಕಾರ್ತಿಕ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2ನೇ ಟೆಸ್ಟ್‌ನಲ್ಲಿ ಆಡುವ ಅವಕಾಶ ಸಿಗದ ಹಿನ್ನೆಲೆಯಲ್ಲಿ ಸಿರಾಜ್ ಸನ್‌ಗ್ಲಾಸ್ ಧರಿಸಿ ಕಣ್ಣುಗಳನ್ನು ಮುಚ್ಚಿಕೊಂಡು ಕುಳಿತಿದ್ದ ದೃಶ್ಯ ಗಮನ ಸೆಳೆದಿತ್ತು. ಈ ದೃಶ್ಯಗಳನ್ನು ಗಮನಿಸಿದ ರಹಾನೆ, "ಈ ದೃಶ್ಯಗಳನ್ನು ನೋಡಿ..." ಎಂದಿದ್ದಾರೆ. ಆಗ ಮುರಳಿ ಕಾರ್ತಿಕ್, "ಅವರು ಅಳುತ್ತಿದ್ದಾರಾ?" ಎಂದು ಪ್ರಶ್ನಿಸಿದ್ದಾರೆ.
ಬಳಿಕ ಮಾತನಾಡಿದ ಕಾರ್ತಿಕ್, ಸಿರಾಜ್ ಭಾವುಕರಾಗಿರುವಂತೆ ಕಾಣುತ್ತಿದ್ದಾರೆ. ನಿರಂತರವಾಗಿ ಅವಕಾಶ ವಂಚಿತರಾಗುವುದು ಯಾವುದೇ ಆಟಗಾರನಿಗೆ ನೋವುಂಟು ಮಾಡುತ್ತದೆ ಎಂದು ಹೇಳಿದ್ದಾರೆ.
"ಸಿರಾಜ್ ಅವರ ಪ್ರದರ್ಶನದ ಅಂಕಿಅಂಶಗಳನ್ನು ನೋಡಿದಾಗ ಅವರನ್ನು ಹೊರಗಿಟ್ಟಿರುವುದು ನನಗೆ ಅಚ್ಚರಿ ಮೂಡಿಸಿದೆ. ಅವರ ಫಾರ್ಮ್ ಸರಿಯಿಲ್ಲ, ನೆಟ್ಸ್‌ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿಲ್ಲ ಅಥವಾ ಬೇರೆ ಯಾವುದಾದರೂ ಕಾರಣವಿದ್ದರೆ ಅವರನ್ನು ಪ್ರವಾಸಕ್ಕೆ ಆಯ್ಕೆ ಮಾಡಬಾರದಿತ್ತು. ತಂಡಕ್ಕೆ ಆಯ್ಕೆ ಮಾಡಿ ಅವಕಾಶ ನೀಡದೆ ಬೆಂಚ್‌ನಲ್ಲಿ ಕೂರಿಸುವುದಾದರೆ ಅದರ ಉದ್ದೇಶವೇನು?" ಎಂದು ಮುರಳಿ ಕಾರ್ತಿಕ್ ಪ್ರಶ್ನಿಸಿದ್ದಾರೆ.
ಇದೀಗ ಸಿರಾಜ್ ಅವರನ್ನು ಸತತವಾಗಿ ತಂಡದಿಂದ ಹೊರಗಿಡುತ್ತಿರುವ ನಿರ್ಧಾರ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




