ಆ್ಯಂಟಿಗುವಾ: ಭಾರತದ ವಿರುದ್ಧದ 4ನೇ ಏಕದಿನ ಪಂದ್ಯದಲ್ಲೂ ವಿಂಡೀಸ್ ಬ್ಯಾಟಿಂಗ್ ವೈಫಲ್ಯತೆ ಮುಂದುವರೆದಿದ್ದು, ಭಾರತಕ್ಕೆ ಗೆಲ್ಲಲು ಕೇವಲ 190 ರನ್ ಗಳ ಅಲ್ಪ ಮೊತ್ತದ ಗುರಿ ನೀಡಿದೆ.
ಟಾಸ್ ಗೆದ್ದ ವಿಂಡೀಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಉತ್ತಮ ಮೊತ್ತ ಕಲೆ ಹಾಕುವ ವಿಶ್ವಾಸದಿಂದಲೇ ವಿಂಡೀಸ್ ತಂಡ ಕಣಕ್ಕಿಳಿಯಿತಾದರೂ, ಭಾರತೀಯ ಬೌಲರ್ ಗಳ ಸಾಂಘಿಕ ಪ್ರದರ್ಶನ ಉತ್ತಮ ಫೀಲ್ಡಿಂಗ್ ನಿಂದಾಗಿ ಹೆಚ್ಚು ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಆರಂಭಿಕ ಆಟಗಾರರನ್ನು ಹೊರತು ಪಡಿಸಿದರೆ ಮಧ್ಯಮ ಕ್ರಮಾಂಕ ಕುಸಿತದಿಂದಾಗಿ ವಿಡೀಸ್ ತಂಡ ಅಲ್ಪ ಮೊತ್ತಕ್ಕೆ ಕುಸಿಯುವಂತಾಯಿತು.ವಿಂಡೀಸ್ ನ ಆರಂಭಿಕರಾದ ಲೂಯಿಸ್ ಮತ್ತು ಹೋಪ್ ತಲಾ 35 ರನ್ ಸಿಡಿಸಿ ಔಟ್ ಆದರೆ, ಎಸ್ ಡಿ ಹೋಪ್ 25 ಹಾಗೂ ಆರ್ ಎಲ್ ಚೇಸ್ 24 ರನ್ ಸಿಡಿಸಿ ಔಟ್ ಆದರು. ಬಳಿಕ ಬಂದ ಯಾವೊಬ್ಬ ಬ್ಯಾಟ್ಸಮನ್ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನೆಲೆಯೂರುವ ಪ್ರಯತ್ನ ಮಾಡಲೇ ಇಲ್ಲ.
ಅಂತಿಮವಾಗಿ ವಿಂಡೀಸ್ ತಂಡ ನಿಗದಿತ 50 ಓವರ್ ಗಳಲ್ಲಿ 189 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಭಾರತದ ಪರ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯಾ ಹಾಗೂ ಉಮೇಶ್ ಯಾದವ್ ತಲಾ 3 ವಿಕೆಟ್ ಪಡೆದರೆ ಕುಲದೀಪ್ ಯಾದವ್ 2 ವಿಕೆಟ್ ಪಡೆದರು.