ನವದೆಹಲಿ: ತಮ್ಮ ಪತ್ನಿ ಜೊತೆಯಿದ್ದ ಫೋಟೊವನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದ ಟ್ವೀಟಿಗರಿಗೆ ಇರ್ಫಾನ್ ಪಠಾಣ್ ಅದೇ ಧಾಟಿಯಲ್ಲಿ ಖಡಕ್ ಪ್ರತ್ಯುತ್ತರ ನೀಡಿದ್ದಾರೆ.
ಈ ಹಿಂದೆ ಕ್ರಿಕೆಟಿಗ ಇರ್ಫಾನ್ ಪಠಾಣ್ ತಮ್ಮ ಪತ್ನಿ ಸಫಾ ಬೇಗ್, ತಮ್ಮ ಅರ್ಧ ಮುಖ ಮುಚ್ಚಿಕೊಂಡು ತುಂಟ ನಗು ಬೀರಿದ್ದ ಸೆಲ್ಫಿಯೊಂದನ್ನು ಫೇಸ್‍ಬುಕ್ ತಮ್ಮ ಅಧಿಕೃತ ಖಾತೆಯಲ್ಲಿ ಅಪ್‍ಲೋಡ್ ಮಾಡಿ “This girl is trouble ?? #love #wifey” ಎಂಬ ಶೀರ್ಷಿಕೆ ನೀಡಿದ್ದರು . ಈ ಭಾವಚಿತ್ರಕ್ಕೆ ಮೆಚ್ಚುಗೆಯ ಸುರಿಮಳೆ ಜೊತೆಗೆ ಮುಸ್ಲಿಂ ಮಹಿಳೆಯೊಬ್ಬರು ಹಿಜಾಬ್ ಧರಿಸದೆ ಮುಖ ತೋರಿಸಿದ್ದು ಹಾಗೂ ಉಗುರಿಗೆ ನೈಲ್ ಪಾಲಿಶ್ ಹಚ್ಚಿಕೊಂಡಿದ್ದು ತಪ್ಪು. ಫೋಟೊವನ್ನು ಫೇಸ್'ಬುಕ್'ನಿಂದ ತೆಗೆಯಿರಿ ಎಂದು ಹೇಳಿದ್ದರು. ಆಕೆಯ ಪ್ರತಿಕ್ರಿಯೆಗೆ ಸಾಕಷ್ಟು ಮೂಲಭೂತವಾದಿಗಳು ಕೈ ಜೋಡಿ ಫೋಟೋ ತೆಗೆಯಲು ಆಗ್ರಹಿಸಿದ್ದರು ಮತ್ತು ಇರ್ಫಾನ್ ಪಠಾಣ್ ಮತ್ತು ಅವರ ಪತ್ನಿ ವಿರುದ್ಧ ಕಿಡಿಕಾರಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇರ್ಫಾನ್ ಪಠಾಣ್ ತಮ್ಮ ಟ್ವಿಟರ್ ಖಾತೆಯಲ್ಲಿಯೂ ಅದೇ ಫೋಟೊವನ್ನು ಅಪ್‍ಲೋಡ್ ಮಾಡಿ 'ಕುಚ್ ತೋ ಲೋಗ್ ಕಹೇಂಗೆ ಲೋಗೋಂ ಕಾ ಕಾಮ್ ಹೈ ಕೆಹೆನಾ' (ಸುಮ್ಮನಿದ್ದರೂ ಜನರು ಏನಾದರೂ ಹೇಳ್ತಾರೆ, ಹೇಳುವುದೇ ಅವರ ಕೆಲಸ) ಎಂದು ಸಿನಿಮಾದ ಹಾಡಿನ ಸಾಲೊಂದನ್ನು ಉಲ್ಲೇಖಿಸಿ ಟೀಕಾಕಾರರನ್ನು ತಮ್ಮ ಕಮೆಂಟ್ ಮೂಲಕವೇ ಬಾಯಿ ಮುಚ್ಚಿಸಿದ್ದಾರೆ.
ಇದೀಗ ಈ ಟ್ವೀಟ್ ಪ್ರಹಸನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.