ಲಂಡನ್: ಕ್ರಿಕೆಟ್ ರಂಗದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ, ಭಾರತ ಮತ್ತು ಪಾಕಿಸ್ತಾನ ತಂಡಗಳು ಬದ್ಧ ಎದುರಾಳಿಗಳು ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆದರೆ.. ಭಾರತದ ಮತ್ತೋರ್ವ ಬದ್ಧ ಎದುರಾಳಿ ಬಾಂಗ್ಲಾದೇಶ ಎಂದರೆ ತಪ್ಪಿಲ್ಲ...
ಹೌದು..ಭಾರತ ಮತ್ತು ಬಾಂಗ್ಲಾದೇಶ ತಂಡಗಳು ವಿಶ್ವ ಕ್ರಿಕೆಟ್ ಟೂರ್ನಿಯಲ್ಲಿ 32 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಬಾಂಗ್ಲಾದೇಶ ಕೇವಲ 5 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಅದೂ ಕೂಡ ಕೊನೆಯ ಎರಡು ಗೆಲುವು 2015ರಲ್ಲಿ ಬಂದ ಗೆಲುವಾಗಿದೆ ಮತ್ತು ಭಾರತದ ವಿರುದ್ಧ ಬಾಂಗ್ಲಾದೇಶ ಗೆದ್ದ ಮೊದಲ ಸರಣಿ ಗೆಲುವು ಕೂಡ ಆಗಿದೆ..
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಬಹುತೇಕ ಪಂದ್ಯಗಳು ಒನ್ ಸೈಡೆಡ್ ಆಗಿದ್ದು, ಪ್ರತೀ ಭಾರಿ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿರುತ್ತಿತ್ತು. ಆದರೆ 2007ರ ವಿಶ್ವಕಪ್ ಟೂರ್ನಿ ಭಾರತೀಯ ಕ್ರಿಕೆಟ್ ಗೆ ಬಾಂಗ್ಲಾದೇಶ ನೀಡಿದ ದೊಡ್ಡ ಮರ್ಮಾಘಾತವಾಗಿತ್ತು. ಅಂದು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ಭಾರತ ತಂಡ ಬಾಂಗ್ಲಾದೇಶದ ವಿರುದ್ಧ ಅನುಭವಿಸಿದ ಒಂದೇ ಒಂದು ಆಘಾತ ಬಾಂಗ್ಲಾದೇಶ ಕ್ರಿಕೆಟ್ ತಂಡದ ಆತ್ಮ ವಿಶ್ವಾಸ ಹೆಚ್ಚಾಗುವಂತೆ ಮಾಡಿತ್ತು. ಆ ಪಂದ್ಯದಲ್ಲಿ ಭಾರತ 5 ವಿಕೆಟ್ ಅಂತರದಿಂದ ಬಾಂಗ್ಲಾದೇಶಕ್ಕೆ ಶರಣಾಗಿತ್ತು.
ಇದೊಂದು ಗೆಲುವು ಬಾಂಗ್ಲಾದೇಶ ಕ್ರಿಕೆಟ್ ಅಭಿಮಾನಿಗಳಲ್ಲಿ ಒಂದು ರೀತೀಯ ಕಿಚ್ಚು ಹೊತ್ತಿಸಿತ್ತು. ಭಾರತೀಯ ಕ್ರೀಡಾಭಿಮಾನಿಗಳು ಬಾಂಗ್ಲಾದೇಶದ ವಿರುದ್ಧದ ಪಂದ್ಯವನ್ನು ಸಾಮಾನ್ಯ ಪಂದ್ಯ ವೆಂಬಂತೆ ಭಾವಿಸಿದರೂ ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳು ಮಾತ್ರ ಭಾರತದ ವಿರುದ್ಧದ ಪಂದ್ಯವನ್ನು ಬದ್ಧ ಶತ್ರುವಿನ ವಿರುದ್ಧದ ಪಂದ್ಯ ಎಂಬಂತೆ ಭಾವಿಸ ತೊಡಗಿದರು. 2012ರಲ್ಲಿ ಮತ್ತೆ ಭಾರತ ತಂಡ ಬಾಂಗ್ಲಾದೇಶದ ವಿರುದ್ಧ ಶರಣಾಗಿತ್ತು. ಆ ಪಂದ್ಯದಲ್ಲಿ ಭಾರತ ಉತ್ತಮ ಮೊತ್ತದ ಹೊರತಾಗಿಯೂ ಕಳಫೆ ಫೀಲ್ಡಿಂಗ್ ಹಾಗೂ ಪ್ರಭಾವಿ ಬೌಲಿಂಗ್ ಕೊರತೆಯಿಂದಾಗಿ ಸೋತಿತ್ತು.
ಭಾರತದ ವಿರುದ್ಧ ಪಂದ್ಯವನ್ನಾಡುವುದೇ ದೊಡ್ಡದು ಎಂಬಂತಿದ್ದ ಪರಿಸ್ಥಿತಿಯಲ್ಲಿ ಬಾಂಗ್ಲಾದೇಶದ ಈ ಗೆಲುವು ಆದೇಶದ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಉತ್ಸಾಹವನ್ನಷ್ಟೇ ಅಲ್ಲ ಹೊಸ ದುರಭಿಮಾನದ ಆರಂಭಕ್ಕೂ ಕಾರಣವಾಗಿತ್ತು. ಈ ಪಂದ್ಯದ ಗೆಲುವಿನ ಬಳಿಕ ಬಾಂಗ್ಲಾದೇಶ ಕ್ರಿಕೆಟ್ ಅಭಿಮಾನಿಗಳು ಭಾರತೀಯ ಕ್ರಿಕೆಟಿಗರನ್ನು ವ್ಯಂಗ್ಯ ಮಾಡುವ ಪ್ರಕ್ರಿಯೆ ಹೆಚ್ಚಾಗಿತ್ತು. ಇದಕ್ಕೆ ಬಾಂಗ್ಲಾದೇಶ ಮಾಧ್ಯಮಗಳೂ ಕೂಡ ತುಪ್ಪ ಸುರಿದಿದ್ದವು. ಭಾರತೀಯ ಕ್ರಿಕೆಟ್ ಆಟಗಾರರ ಕುರಿತಂತೆ ಮಾಧ್ಯಮಗಳ ಕುಚೋದ್ಯ ಹೆಚ್ಚಾಗಿತ್ತು. ಇದು ವ್ಯಾಪಕವಾಗಿ ವಿಶ್ವ ಸಮುದಾಯದ ಗಮನಕ್ಕೆ ಬಂದಿದ್ದು ಮಾತ್ರ 2016ರ ಏಷ್ಯಾಕಪ್ ಟೂರ್ನಿ ವೇಳೆ..
ಬಾಂಗ್ಲಾದೇಶದಲ್ಲಿ ನಡೆದ ಏಷ್ಯಾಕಪ್ ಟೂರ್ನಿ ಭಾರತ ಮತ್ತು ಪಾಕಿಸ್ತಾನ ತಂಡಗಳ ಪಂದ್ಯಕ್ಕಿಂತ ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಪಂದ್ಯಗಳು ಹೆಚ್ಚು ರೋಚಕವೆಂಬಂತೆ ಬಿಂಬಿಸಲಾಗುತ್ತಿತ್ತು. ಇದಕ್ಕೆ ಇಂಬು ನೀಡುವಂತೆ ಸ್ಥಳೀಯ ಪತ್ರಿಕೆಯೊಂದು ಬಾಂಗ್ಲಾ ಮತ್ತು ಭಾರತ ತಂಡದ ನಡುವಿನ ಪಂದ್ಯಕ್ಕೂ ಮೊದಲು ವಿವಾದಿತ ಚಿತ್ರವೊಂದನ್ನು ಪ್ರಕಟಿಸಿ ವ್ಯಾಪಕ ವಿವಾದಕ್ಕೆ ಈಡಾಗಿತ್ತು. ಆಂದಿನ ಭಾರತ ತಂಡದ ನಾಯಕ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಭಾರತೀಯ ಕ್ರಿಕೆಟಿಗರ ಅರ್ಧ ತಲೆ ಬೋಳಿಸಿ ಚಿತ್ರವನ್ನು ಪ್ರಕಟಿಸಲಾಗಿತ್ತು. ಅದೇ ಚಿತ್ರದಲ್ಲಿ ಬಾಂಗ್ಲಾ ಆಟಗಾರನೋರ್ವ ರೇಸರ್ ಹಿಡಿದು ನಿಂತಿದ್ದ ದೃಶ್ಯ ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು.
ಇದೇ ಪತ್ರಿಕೆ ಮತ್ತೊಂದು ಪಂದ್ಯದ ವೇಳೆ ಬಾಂಗ್ಲಾ ಬೌಲರ್ ಟಸ್ಕಿನ್ ಭಾರತ ತಂಡದ ನಾಯಕ ಧೋನಿ ಅವರ ರುಂಡವನ್ನು ಹಿಡಿದಿದ್ದ ಚಿತ್ರ ಪ್ರಕಟಿಸಿ ಭಾರತೀಯ ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಟೂರ್ನಿಯಲ್ಲಿ ಬಾಂಗ್ಲಾ ಬೌಲರ್ ಟಸ್ಕಿನ್ ಉತ್ತಮ ಫಾರ್ಮ್ ನಲ್ಲಿರುವುದನ್ನು ಬಿಂಬಿಸುವುದಕ್ಕಾಗಿ ಧೋನಿ ಅವರ ರುಂಡವನ್ನು ಅವರ ಕೈಯಲ್ಲಿರುವಂತೆ ಚಿತ್ರಿಸಲಾಗಿತ್ತು. ಇದೂ ಕೂಡ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಅಂತೆಯೇ ಕಳೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶವನ್ನು ಭಾರತ ತಂಡ ಕೇವಲ 1 ರನ್ ಅಂತರದಲ್ಲಿ ಸೋಲಿಸಿತ್ತು. ತೀವ್ರ ರೋಚಕತೆ ಕೆರಳಿಸಿದ್ದ ಈ ಪಂದ್ಯದ ಕೊನೆಯ ಕ್ಷಣದ ವರೆಗೂ ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳು ತಮ್ಮದೇ ಗೆಲುವು ಎಂದು ಭಾವಿಸಿದ್ದರು. ಬಾಂಗ್ಲಾ ಆಟಗಾರ ಮುಷ್ಫಿಕರ್ ರೆಹಮಾನ್ ಕೂಡ ತಂಡ ಗೆಲುವಿನ ಸನಿಹವಾಗುತ್ತಿದ್ದಂತೆಯೇ ಗೆದ್ದೇ ಬಿಟ್ಟೆವು ಎಂಬಂತೆ ಮೈದಾನದಲ್ಲೇ ಸಂಭ್ರಮಿಸಿದ್ದರು. ಆದರೆ ಬಳಿಕ ಪಾಂಡ್ಯಾ ಎಸೆದ ಅದ್ಬುತ ಎಸೆತಗಳು ಮತ್ತು ನಾಯಕ ಧೋನಿ ಚಾಣಾಕ್ಷತನದಿಂದಾಗಿ ಬಾಂಗ್ಲಾ ಕೈಯಿಂದ ಗೆಲುವನ್ನು ಕಸಿದಿತ್ತು.
ಆ ಕ್ಷಣ ನಿಜಕ್ಕೂ ಬಾಂಗ್ಲಾದೇಶ ಕ್ರಿಕೆಟ್ ಅಭಿಮಾನಿಗಳು ಮೈದಾನದಲ್ಲೇ ಕಣ್ಣೀರಿಡುವಂತೆ ಮಾಡಿತ್ತು. ಈ ಪಂದ್ಯ ಕೂಡ ಭಾರತದ ವಿರುದ್ಧ ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳು ಕೋಪಗೊಳ್ಳಲು ಕಾರಣವಾಗಿತ್ತು. ಇದರ ಮುಂದುವರಿದ ಭಾಗ ಎಂಬಂತೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸೆಮಿ ಫೈನಲ್ ನಲ್ಲಿ ಭಾರತ ಮತ್ತು ಬಾಂಗ್ಲಾ ಎದುರಾಗುತ್ತಿದ್ದು, ಈ ಬಗ್ಗೆಯೂ ಬಾಂಗ್ಲಾದೇಶದ ಕೆಲ ಕಿಡಿಗೇಡಿ ಅಭಿಮಾನಿಗಳು ತಮ್ಮ ದುರಭಿಮಾನ ಮೆರೆದಿದ್ದಾರೆ. ಇತ್ತೀಚೆಗೆ ಬಾಂಗ್ಲಾದೇಶದ ಕೆಲ ಕಿಡಿಗೇಡಿ ಅಭಿಮಾನಿಗಳು ಒಂದು ನಾಯಿಗೆ ಭಾರತ ತ್ರಿವರ್ಣ ಧ್ವಜ ಹೊದಿಸಿ ಅದನ್ನು ಬಾಂಗ್ಲಾದೇಶ ಬಾವುಟ ಹೊದ್ದ ಹುಲಿಯೊಂದು ಅಟ್ಟಾಡಿಸುತ್ತಿರುವ ಚಿತ್ರ ವ್ಯಾಪಕ ವೈರಲ್ ಆಗಿದೆ. ಈ ಎಲ್ಲ ಘಟನೆಗಳು ಬಾಂಗ್ಲಾದೇಶ ಕ್ರೀಡಾಭಿಮಾನಿಗಳು ತಮಗೆ ಭಾರತವೇ ಬದ್ಧ ಎದುರಾಳಿ ಎಂಬಂತೆ ಭಾವಿಸಿದಂತಿದೆ.
ಒಂದು ಕಾಲದ ದಿಗ್ಗಜ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ಇಂದು ಬಾಂಗ್ಲಾದೇಶದ ಕಾರಣದಿಂದಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದೆ. ವಿಶ್ವ ಕ್ರಿಕೆಟ್ ನಲ್ಲಿ ಬಾಂಗ್ಲಾದೇಶ ಒಂದು ತಂಡವಾಗಿ ಬೆಳೆಯುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಮತ್ತೊಂದು ತಂಡವನ್ನು ತುಚ್ಛವಾಗಿ ಕಾಣುವ ಆ ದೇಶದ ಕ್ರೀಡಾಭಿಮಾನಿಗಳ ವಿಕೃತ ಮನೋಭಾವ ಬದಲಾಗಬೇಕಿದೆ. ಇಷ್ಟು ದಿನ ಪಾಕಿಸ್ತಾನ ಕ್ರೀಡಾಭಿಮಾನಿಗಳಲ್ಲಿ ಕಾಣುತ್ತಿದ್ದ ಇಂತಹ ಮನೋ ಲಕ್ಷಣ ಇದೀಗ ಬಾಂಗ್ಲಾದೇಶ ಕ್ರೀಡಾಭಿಮಾನಿಗಳಲ್ಲಿ ಕಾಣಿಸುತ್ತಿರುವುದು ಶೋಚನೀಯ...