ನವದೆಹಲಿ: ಐಸಿಸಿ ಟೂರ್ನಮೆಂಟ್ ಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಆಜೇಯ ಸಾಧನೆ ಹೊಂದಿದ್ದು, 1985ರಲ್ಲಿ ಪಾಕಿಸ್ತಾನ ಅನುಭವಿಸಿದ್ದ ಅಘಾತ ಮತ್ತೆ ಮರುಕಳಿಸುತ್ತದೆ ಎಂಬ ಅಭಿಪ್ರಾಯವ್ಯಕ್ತವಾಗುತ್ತಿದೆ.
ಐಸಿಸಿ ಟೂರ್ನಮೆಂಟ್ ಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ದಾಖಲೆ ಅತ್ಯುತ್ತಮವಾಗಿದ್ದು, ಇಂದೂ ಕೂಡ ಭಾರತವೇ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಹೀಗಿದ್ದೂ ಪಾಕಿಸ್ತಾನ ಕೂಡ ಇತಿಹಾಸ ಬದಲಿಸುವ ಪಣತೊಟ್ಟಿದ್ದು, ಇಂದು ಶತಾಯಗತಾಯಗತಾಯ ಗೆಲುವಿಗಾಗಿ ಸೆಣಸಲಿದೆ. ಇನ್ನು ಪ್ರಸಕ್ತ ಸಾಲಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿ 1985ರ ಸರಣಿಯನ್ನೇ ಹೋಲುತ್ತಿದ್ದು, ಅಂದಿನ ಸರಣಿಯಲ್ಲೂ ಕೂಡ ಭಾರತ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಜಯಭೇರಿ ಭಾರಿಸಿತ್ತು. ಅಂತೆಯೇ ಮತ್ತದೇ ಪಾಕಿಸ್ತಾನದ ವಿರುದ್ಧ ಫೈನಲ್ ಪಂದ್ಯದಲ್ಲೂ ರೋಚಕ ಜಯಸಾಧಿಸಿ ಪ್ರಶಸ್ತಿಗೆ ಮುತ್ತಿಟ್ಟಿತ್ತು.
1985ರ ವಿಶ್ವ ಚಾಂಪಿಯನ್ ಷಿಪ್ ಟೂರ್ನಿ ಆಸ್ಟ್ರೇಲಿಯಾದಲ್ಲಿ ಆಯೋಜನೆಯಾಗಿತ್ತು. 1985 ಫೆಬ್ರವರಿ 20ರಂದು ಮೆಲ್ಬೋರ್ನ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಮೊದಲ ಪಂದ್ಯ ಆಯೋಜನೆಯಾಗಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಖಾಸಿಮ್ ಒಮರ್ ಅವರ ಅರ್ಧ ಶತಕದ ನೆರವಿನಿಂದಾಗಿ 50 ಓವರ್ ಗಳಲ್ಲಿ 183 ರನ್ ಗಳಿಸಿತ್ತು. ಭಾರತದ ರೋಜರ್ ಬಿನ್ನಿ 35 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು.
ಪಾಕಿಸ್ತಾನ ನೀಡಿದ್ದ 184 ರನ್ ಗಳ ಬೆನ್ನು ಹತ್ತಿದ ಭಾರತ 4 ವಿಕೆಟ್ ನಷ್ಟಕ್ಕೆ 45.5 ಓವರ್ ಗಳಲ್ಲಿ 184 ರನ್ ಸೇರಿಸಿ ಗೆಲುವು ಸಾಧಿಸಿತ್ತು. ಭಾರತದ ಪರ ಮಹಮದ್ ಅಜರುದ್ದೀನ್ ಅಜೇಯ 93 ರನ್ ಗಳಿಸಿದ್ದರೆ, ಸುನಿಲ್ ಗವಾಸ್ಕರ್ 54 ರನ್ ಸಿಡಿಸಿದ್ದರು. ಪಾಕ್ ಪರ ಇಮ್ರಾನ್ ಖಾನ್ 27 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. 6 ವಿಕೆಟ್ ಗಳ ಅಂತರದಿಂದ ಭಾರತ ತನ್ನ ಮೊದಲ ಪಂದ್ಯವನ್ನು ಜಯಿಸಿ ಮುಂದಿನ ಹಂತಕ್ಕೆ ನಡೆದಿತ್ತು.
ಇನ್ನು ಉಭಯ ತಂಡಗಳು ಅದೇ ಸರಣಿಯಲ್ಲಿ ಫೈನಲ್ ತಲುಪಿದ್ದವು. 1985 ಮಾರ್ಚ್ 10 ರಂದು ಎಂಸಿಜಿ ಮೈದಾನದಲ್ಲಿ ಹೈವೋಲ್ಟೇಜ್ ಫೈನಲ್ ಪಂದ್ಯ ನಡೆದಿತ್ತು. ಮೊದಲ ಪಂದ್ಯದಂತೆಯೇ ಫೈನಲ್ ನಲ್ಲೂ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿತ್ತು. ಪಾಕ್ ಪರ ಜಾವೆದ್ ಮಿಯಾಂದಾದ್ ಗಳಿಸಿದ್ದ 48 ರನ್ ಗಳೇ ವೈಯುಕ್ತಿಕ ಗರಿಷ್ಛ ಮೊತ್ತವಾಗಿತ್ತು. ಕಪಿಲ್ ದೇವ್ 23 ರನ್ ನೀಡಿ 3 ವಿಕೆಟ್ ಪಡೆದಿದ್ದರು.
ಪಾಕ್ ನೀಡಿದ 177 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 47.1 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತ್ತು. ಕ್ರಿಸ್ ಶ್ರೀಕಾಂತ್ ಅವರು 67 ರನ್ ಗಳಿಸಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಪಾಕ್ ಪರ ಇಮ್ರಾನ್ ಖಾನ್ 28 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ಅಂದು ಭಾರತ ಭರ್ಜರಿ 8 ವಿಕೆಟ್ ಗಳ ಅಂತರದಿಂದ ಫೈನಲ್ ಪಂದ್ಯ ಜಯಿಸಿ ವಿಶ್ವ ಚಾಂಪಿಯನ್ ಷಿಪ್ ಪ್ರಶಸ್ತಿಗೆ ಮುತ್ತಿಟ್ಟಿತ್ತು. ಕ್ರಿಸ್ ಶ್ರೀಕಾಂತ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಸರಣಿ ಕೂಡ ಅದೇ ಇತಿಹಾಸವನ್ನು ನೆನಪಿಸುವಂತಿದ್ದು, ಭಾರತ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿದ್ದು, ಈ ಎರಡು ತಂಡಗಳೇ ಮತ್ತೆ ಫೈನಲ್ ತಲುಪಿವೆ.