ರಾಂಚಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಚೇತೇಶ್ವರ ಪೂಜಾರ ಅವರ ಭರ್ಜರಿ ಶತಕ(130)ದ ನೆರವಿನೊಂದಿಗೆ ಟೀಂ ಇಂಡಿಯಾ ಆರು ವಿಕೆಟ್ ನಷ್ಟಕ್ಕೆ 360 ರನ್ ಗಳಿಸಿದೆ.
ರಾಂಚಿಯ ಜೆಎಸ್ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ಆರು ವಿಕೆಟ್ ನಷ್ಟಕ್ಕೆ 360 ರನ್ ಗಳಿಸಿದ್ದು, ಮುನ್ನಡೆ ಸಾಧಿಸಲು ಇನ್ನು 91 ರನ್ ಗಳಿಸಬೇಕಿದೆ.
ಪ್ರವಾಸಿ ತಂಡ ನೀಡಿದ್ದ 451ರನ್‌ಗಳ ಸವಾಲಿನ ಮೊತ್ತ ಬೆನ್ನು ಹತ್ತಿರುವ ಟೀಂ ಇಂಡಿಯಾ, ಆರಂಭಿಕ ಆಟಗಾರರಾದ ಕೆಎಲ್ ರಾಹುಲ್(67) ಹಾಗೂ ಮುರುಳಿ ವಿಜಯ್(82) ಅರ್ಧಶತಕಗಳ ನೆರವಿನಿಂದ ಉತ್ತಮ ಆರಂಭ ಕಂಡಿತ್ತು. ಈಗ 130ರನ್‌ಗಳಿಸಿರುವ ಪೂಜಾರ ಅವರು ನಾಳೆಗೂ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಅವರಿಗೆ ವೃದ್ಧಿಮಾನ್ ಸಾಹಾ(ಅಜೇಯ 18) ಸಾಥ್ ನೀಡಲಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 451 ರನ್ ಗಳಿಗೆ ಆಲೌಟ್ ಆಯಿತು. ಡೇವಿಡ್ ವಾರ್ನರ್(19) ಹಾಗೂ ಮ್ಯಾಟ್ ರೆನ್ಶಾ(44) ಅರ್ಧ ಶತಕದ ಜೊತೆಯಾಟ ನೀಡಿದರು. ವಾರ್ನರ್ ವಿಕೆಟ್ ಒಪ್ಪಿಸಿದ ಬಳಿಕ ಕಣಕ್ಕಿಳಿದ ನಾಯಕ ಸ್ವೀವನ್ ಸ್ಮಿತ್ ನಾಯಕನ ಆಟವಾಡಿ ಅಜೇಯ 178 ರನ್ ಮತ್ತು ಗ್ಲೇನ್ ಮ್ಯಾಕ್ಸ್ ವೆಲ್ 104 ರನ್ ಗಳಿಸಿದ್ದು ಆಸೀಸ್ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಯಿತು.
ಭಾರತ ಪರ ರವೀಂದ್ರ ಜಡೇಜಾ 5, ಉಮೇಶ್ ಯಾವದ್ 3 ಮತ್ತು ಆರ್ ಅಶ್ವಿನ್ 1 ವಿಕೆಟ್ ಪಡೆದಿದ್ದಾರೆ.