ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಬ್ಯಾಟಿಂಗ್ ನಲ್ಲಿ ವಿಫಲವಾಗಲು ಅವರ ಭಾವೋದ್ವೇಗವೇ ಕಾರಣ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ಐಸಿಸಿ ವೆಬ್ ಸೈಟ್ ಗಾಗಿ ವಿಶೇಷ ಅಂಕಣ ಬರೆದಿರುವ ಸೌರವ್ ಗಂಗೂಲಿ, ಅಂಕಣದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯಕ್ಕೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಪ್ರಮುಖವಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತದ ರನ್ ಮೆಷಿನ್ ಕೊಹ್ಲಿ ವಿಫಲರಾಗಲು ಅವರ ಭಾವೋದ್ವೇಗವೇ ಕಾರಣವಾಗಿದೆ. ಕೊಹ್ಲಿ ಮೇಲೆ ತಂಡದ ನಾಯಕತ್ವದ ಒತ್ತಡವಿದ್ದು, ಯಾವುದೇ ಪರಿಸ್ಥಿತಿಯಲ್ಲೂ ಪಂದ್ಯ ಗೆಲ್ಲಲೇಬೇಕು ಎಂಬ ಒತ್ತಡದಿಂದಾಗಿ ಕೊಹ್ಲಿ ಉದ್ವೇಗಗೊಳ್ಳುತ್ತಿದ್ದಾರೆ ಎಂದು ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ಕೊಹ್ಲಿ ಶಾಂತಚಿತ್ತದಿಂದ ಕಣಕ್ಕಿಳಿದರೆ ಖಂಡಿತಾ ಎದುರಾಳಿಗಳಿಗೆ ಅವರು ಕಬ್ಬಿಣದ ಕಡಲೆಯಾಗಲಿದ್ದಾರೆ. ಆಸ್ಟ್ರೇಲಿಯಾ ಸರಣಿ ಕೊಹ್ಲಿ ಉತ್ತಮ ಪಾಠವಾಗಿದ್ದು, ಮುಂದಿನ ಸರಣಿಗಳಲ್ಲಿ ಕೊಹ್ಲಿ ಶಾಂತಚಿತ್ತದಿಂದ ಕಣಕ್ಕಿಳಿಯುವ ಮೂಲಕ ತಮ್ಮ ಬ್ಯಾಟ್ ನಿಂದ ಉತ್ತಮ ರನ್ ಮಳೆ ಹರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು. ನನ್ನ ಪ್ರಕಾರ ಇಬ್ಬರು ವಿರಾಟ್ ಕೊಹ್ಲಿ ಇದ್ದು, ಒಂದು ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಮತ್ತೊಂದು ನಾಯಕ ವಿರಾಟ್ ಕೊಹ್ಲಿ. ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಈಗಾಗಲೇ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿಗೆ ಯಾವಾಗಲೂ ಗೆಲುವೇ ಮುಖ್ಯ. ಆದು ಪ್ರತೀ ಸಂದರ್ಭದಲ್ಲೂ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಲ್ಲಿ ಸರಣಿ ಗೆದ್ದ ಟೀಂ ಇಂಡಿಯಾ ಕುರಿತು ಮಾತನಾಡಿರುವ ಗಂಗೂಲಿ, ಆಸಿಸ್ ವಿರುದ್ಧದ ಗೆಲುವಿಗೆ ಭಾರತ ತಂಡ ನಿಜಕ್ಕೂ ಅರ್ಹವಾಗಿತ್ತು. ಎಲ್ಲ ವಿಭಾಗಗಳಲ್ಲಿಯೂ ಭಾರತ ಮೇಲುಗೈ ಸಾಧಿಸಿತ್ತು. ಪ್ರಮುಖವಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿ ಜಯದ ಶ್ರೇಯ ಸಲ್ಲಬೇಕಿರುವುದು ಕೋಚ್ ಅನಿಲ್ ಕುಂಬ್ಳೆ ಅವರಿಗೆ. ತಂಡದ ಆಟಗಾರರ ಕುರಿತಂತೆ ಸೂಕ್ಷ್ಮ ವಿಚಾರಗಳನ್ನು ಮನಗಂಡು ಅವರಿಗೆ ತರಬೇತಿ ನೀಡಿದ್ದಾರೆ. ತಂಡದ ಕೋಚ್ ಆಯ್ಕೆ ವೇಳೆ ಕುಂಬ್ಳೆ ತಮ್ಮ ವಿಷನ್ ಏನು ಎಂಬುದನ್ನು ತಿಳಿಸಿಕೊಟ್ಟಿದ್ದರು. ತವರಿನಲ್ಲಿ ಭಾರತ ಬಲಾಢ್ಯವಾಗಿದೆ. ಆದರೆ ಇದೇ ಬಲಿಷ್ಠತನ ವಿದೇಶಿ ಪಿಚ್ ಗಳಲ್ಲೂ ಮುಂದುವರೆಯಬೇಕು ಎಂಬುದು ಅವರ ಗುರಿಯಾಗಿದೆ ಎಂದು ಸೌರವ್ ಹೇಳಿದರು.
ಅಂತೇಯ ಭಾರತದ ಉದಯೋನ್ಮುಖ ಆಟಗಾರರಾದ ಚೇತೇಶ್ವರ ಪೂಜಾರ, ಕೆಎಲ್ ರಾಹುಲ್, ಉಮೇಶ್ ಯಾದವ್ ಮತ್ತು ಸ್ಟಾರ್ ಸ್ಪಿನ್ನರ್ ಗಳಾದ ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರ ಪ್ರದರ್ಶನವನ್ನೂ ಕೂಡ ಗಂಗೂಲಿ ಕೊಂಡಾಡಿದ್ದಾರೆ.