ಕೊಲಂಬೋ: ಶ್ರೀಲಂಕಾ ವಿರುದ್ಧ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಏಕೈಕ ಟಿ20 ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ ಗಳ ಭರ್ಜರಿ ಜಯಸಾಧಿಸಿದೆ.
ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ನಡೆದ ಏಕೈಕ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಶ್ರೀಲಂಕಾ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 170 ರನ್ ಗಳ ಬೃಹತ್ ಮೊತ್ತ ಪೇರಿಸಿತು.
ಶ್ರೀಲಂಕಾ ಪರ ಮುನವೀರಾ 59 ರನ್ ಹಾಗೂ ಪ್ರಿಯಂಜನ್ ಅಜೇಯ 40 ರನ್ ಗಳಿಸಿ ಲಂಕಾದ ಬೃಹತ್ ಮೊತ್ತಕ್ಕೆ ಕಾರಣರಾದರು. ಭಾರತದ ಪರ ಚಾಹಲ್ 3 ಹಾಗೂ ಕುಲದೀಪ್ ಯಾದವ್ 2 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ ಹಾಗೂ ಬುಮ್ರಾ ತಲಾ 1 ವಿಕೆಟ್ ಪಡೆದರು.
ಇನ್ನು ಲಂಕಾ ನೀಡಿದ 171 ರನ್ ಗಳ ಗುರಿ ಬಲಿಷ್ಟ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಟೀಂ ಇಂಡಿಯಾಗೆ .ಯಾವ ಹಂತದಲ್ಲೂ ಕಠಿಣವೆನಿಸಲೇ ಇಲ್ಲ. ಆದರೆ ಆರಂಭಿಕ ಆಟಗಾರ ರೋಹಿತ್ ಶರ್ಮಾ ಕೇವಲ 9 ರನ್ ಗಳಿಸಿ ಆರಂಭದಲ್ಲೇ ವಿಕೆಟ್ ಒಪ್ಪಿಸಿದ್ದಾಗ ಕೊಂಚ ಆತಂಕ ಎದುರಾಗಿತ್ತು. ಇದಕ್ಕೆ ಇಂಬು ನೀಡುವಂತೆ ರಾಹುಲ್ ಕೂಡ 24 ರನ್ ಗಳಿಸಿ ಔಟ್ ಆದರು. ಬಳಿಕ ಪಾಂಡೆ ಜೊತೆ ಗೂಡಿದ ಭಾರತದ ರನ್ ಮೆಷಿನ್ ಕೊಹ್ಲಿ ಭಾರತವನ್ನು ಸುಸ್ತಿತಿಗೆ ಕೊಂಡೊಯ್ದರು.
ಈ ಜೋಡಿ 3ನೇ ವಿಕೆಟ್ ಜೊತೆಯಾದಲ್ಲಿ 100 ರನ್ ಕಲೆಹಾಕುವ ಮೂಲಕ ಭಾರತ ತಂಡವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದರು. ಕೊಹ್ಲಿ 54 ಎಸೆತಗಳಲ್ಲಿ 82 ರನ್ ಸಿಡಿಸಿದರು. ಅಂತೆಯೇ ಕೊಹ್ಲಿ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಕೊಹ್ಲಿ ಇನ್ನಿಂಗ್ಸ್ ನಲ್ಲಿ ಒಟ್ಟು 7 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿತ್ತು, ಇನ್ನು ಕೊಹ್ಲಿ ಅತ್ಯುತ್ತಮ ಸಾಥ್ ನೀಡಿದ ಮನೀಷ್ ಪಾಂಡೆ 36 ಎಸೆತಗಳಲ್ಲಿ 51 ರನ್ ಸಿಡಿಸಿದರು.
ತಂಡ ಇನ್ನೇನು ಗೆಲುವು ಸಾಧಿಸುತ್ತದೆ ಎನ್ನುವಾಗಲೇ ಭರ್ಜರಿ ಹೊಡೆತಕ್ಕೆ ಕೈಹಾಕಿದ ಕೊಹ್ಲಿ ಶನಕಾಗೆ ಕ್ಯಾಚಿತ್ತು ಪೆವಿಲಿಯನ್ ನತ್ತ ಭಾರದ ಹೆಜ್ಜೆ ಹಾಕಿದರು. ಬಳಿಕ ಪಾಂಡೆ ಜೊತೆಗೂಡಿದ ಮಹೇಂದ್ರ ಸಿಂಗ್ ಗೆಲುವಿನ ಔಪಚಾರಿಕತೆ ಮುಗಿಸಿದರು. ವಿಶೇಷವೆಂದರೆ ಪಾಂಡೆ ಗೆಲುವಿಗೆ ಇನ್ನೊಂದು ರನ್ ಬೇಕಿದ್ದಾಗ ಬೌಂಡರಿ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಷ್ಚೇ ಅಲ್ಲದೇ ತಮ್ಮ ಅರ್ಧಶತಕ ಕೂಡ ಪೂರೈಸಿದರು.