ಇಂದೋರ್: ಭಾರತ ಮತ್ತು ಆಸ್ಚ್ರೇಲಿಯಾ ಕ್ರಿಕೆಟ್ ತಂಡಗಳ ನಡುವೆ ಇಂದು ನಡೆಯಬೇಕಿದ್ದ 3ನೇ ಏಕದಿನ ಪಂದ್ಯದ ನಕಲಿ ಟಿಕೆಟ್ ಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಬೇಧಿಸಿದ್ದು, ಈ ಸಂಬಂಧ ಇಂದೋರ್ ನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಧ್ಯ ಪ್ರದೇಶದ ಇಂದೋರ್ ನಲ್ಲಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ 3ನೇ ಏಕದಿನ ಪಂದ್ಯ ನಡೆಯುತ್ತಿದ್ದು, ಈಗಾಗಲೇ ಕ್ರೀಡಾಂಗಣದತ್ತ ಸಾವಿರಾರು ಪ್ರೇಕ್ಷಕರು ಆಗಮಿಸುತ್ತಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡ ಜಾಲವೊಂದು ನಕಲಿ ಟಿಕೆಟ್ ಗಳನ್ನು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕೂಡಲೇ ಎಚ್ಚೆತ್ತ ಇಂದೋರ್ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು 24 ವರ್ಷದ ರವೀಂದ್ರ ಮಿಮ್ರೋತ್ ಮತ್ತು 23 ವರ್ಷದ ಧೀರಜ್ ಸರ್ವಾನ್ ಎಂದು ಗುರುತಿಸಲಾಗಿದೆ.
ಕಾರ್ಯಾಚರಣೆ ವೇಳೆ ಪೊಲೀಸರು 9 ನಕಲಿ ಟಿಕೆಟ್ ಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು 40ಕ್ಕೂ ಹೆಚ್ಚು ಟಿಕೆಟ್ ಗಳನ್ನು ಮುದ್ರಿಸಿದ್ದು, ಈ ಪೈಕಿ 31 ಟಿಕೆಟ್ ಗಳನ್ನು ಬರೊಬ್ಬರಿ 41 ಸಾವಿರ ರೂ ಗಳಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಇಂದೋರ್ ಎಸ್ ಪಿ ಅಮರೇಂದ್ರ ಸಿಂಗ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಸ್ಕ್ಯಾನರ್ ಗಳನ್ನು ಬಳಕೆ ಮಾಡಿ ಆರೋಪಿಗಳು ನಕಲಿ ಟಿಕೆಟ್ ಗಳನ್ನು ಮುದ್ರಿಸುತ್ತಿದ್ದರು ಎಂದು ಹೇಳಿದ್ದಾರೆ.