ನಾಗಪುರ: ನಾಗಪುರದಲ್ಲಿ ನಡೆಯುತ್ತಿರು 5ನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಗೆಲ್ಲಲು 243 ರನ್ ಗಳ ಸಾಧಾರಣ ಗುರಿ ನೀಡಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 242 ಕಲೆಹಾಕಿ ಭಾರತಕ್ಕೆ 243 ರನ್ ಗಳ ಗುರಿ ನೀಡಿತು. ಉತ್ತಮ ಆರಂಭದ ಹೊರತಾಗಿಯೂ ಭಾರತೀಯ ಬೌಲರ್ ಗಳ ಶಿಸ್ತಿನ ದಾಳಿಗೆ ಮಣಿದ ಆಸ್ಚ್ರೇಲಿಯಾ ತಂಡ ಅಂತಿಮವಾಗಿ 9 ವಿಕೆಟ್ 242 ರನ್ ಗಳನ್ನಷ್ಟೇ ಕಲೆಹಾಕಲು ಶಕ್ತವಾಯಿತು. ಆಸಿಸ್ ಪರ ಆರಂಭಿಕರಾದ ಡೇವಿಡ್ ವಾರ್ನರ್ (53 ರನ್), ಆ್ಯರಾನ್ ಫಿಂಚ್ (32 ರನ್) ಉತ್ತಮ ಆರಂಭ ಒದಗಿಸಿದರು. ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ಈ ಜೋಡಿಯನ್ನು ಬೇರ್ಪಡಿಸಿ ಭಾರತಕ್ಕೆ ಮೊದಲ ಮುನ್ನಡೆ ತಂದರು. ಬಳಿಕ ಅರ್ಧಶತಕ ಗಳಿಸಿದ್ದ ವಾರ್ನರ್ ರನ್ನು ಅಕ್ಸರ್ ಪಟೇಲ್ ಪೆವಿಲಿಯನ್ ಗೆ ಆಟ್ಟುವ ಮೂಲಕ ಆಸಿಸ್ ಗೆ ಮತ್ತೊಂದು ಶಾಕ್ ನೀಡಿದರು. ಆಸಿಸ್ ನಾಯಕ ಸ್ಟೀವ್ ಸ್ಮಿತ್ 16 ರನ್ ಗಳಿಸಿ ಜಾದವ್ ಗೆ ವಿಕೆಟ್ ಒಪ್ಪಿಸಿದರೆ ಹ್ಯಾಂಡ್ಸ್ ಕಾಂಬ್ ರನ್ನು ಅಕ್ಸರ್ ಪಟೇಲ್ ಔಟ್ ಮಾಡಿದರು.
ಬಳಿಕ ಬಂದ ಟ್ರಾವಿಸ್ ಹೆಡ್ (42 ರನ್), ಮಾರ್ಕಸ್ ಸ್ಟಾಯಿನಸ್ (46 ರನ್) ಆಸಿಸ್ ಬ್ಯಾಟಿಂಗ್ ಜೀವ ತುಂಬಿದರು. ಟ್ರಾವಿಸ್ ಹೆಡ್ ರನ್ನು ಅಕ್ಸರ್ ಪಟೇಲ್ ಕ್ಲೀನ್ ಬೋಲ್ಡ್ ಮಾಡಿದರೆ, ಸ್ಟಾಯಿನಸ್ ರನ್ನು ಬುಮ್ರಾ ಪೆವಿಲಿಯನ್ ಗೆ ಅಟ್ಟಿದರು. ಬಳಿಕ ಬಂದ ಮ್ಯಾಥ್ಯೂ ವೇಡ್ 20 ರನ್ ಗಳಿಸಿದ್ದು ಬಿಟ್ಟರೆ, ಆಸಿಸ್ ನ ಉಳಿದ ಯಾವ ಬ್ಯಾಟ್ಸಮನ್ ಗಳೂ ಕೂಡ ಗಟ್ಟಿಯಾಗಿ ಕ್ರೀಸ್ ನಲ್ಲಿ ನಿಂತು ರನ್ ಗಳಿಸುವ ಪ್ರಯತ್ನ ಮಾಡಲಿಲ್ಲ. ಪರಿಣಾಮ ಆಸ್ಚ್ರೇಲಿಯಾ ತಂಡ 9 ವಿಕೆಟ್ ನಷ್ಟಕ್ಕೆ 242 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಭಾರತದ ಪರ ಅಕ್ಸರ್ ಪಟೇಲ್ 3 ಮತ್ತು ಬುಮ್ರಾ 2 ವಿಕೆಟ್ ಗಳಿಸಿದರೆ, ಜಾದವ್, ಪಾಂಡ್ಯಾ ಮತ್ತು ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics