ನವದೆಹಲಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್ ಆಫ್ರಿದಿ ಮತ್ತೆ ಕಾಶ್ಮೀರ ವಿಚಾರವನ್ನು ಕೆದಕಿದ್ದಾರೆ. ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರ ಎಂದೆನ್ನುವ ಮೂಲಕ ಮತ್ತೆ ಉದ್ದಟತನ ತೋರಿದ್ದಾರೆ.
ಕಾಶ್ಮೀರ ವಿಚಾರವಾಗಿ ಆಫ್ರಿದಿ ಟ್ವೀಟ್ ಮಾಡಿದ್ದು ಕಾಶ್ಮೀರೀ ಜನರ ಸ್ವಾತಂತ್ರ್ಯ ಮತ್ತು ಸ್ವಯಂ ಆಡಳಿತೆಕ್ಕಾಗಿ ಬೆಂಬಲ ಸೂಚಿಸಿ ಎಂದಿದ್ದಾರೆ. ಭಾರತೀಯ ಸೈನಿಕರಿಂದ ಕಾಶ್ಮೀರ ಕಣಿವೆಯಲ್ಲಿ ರಕ್ತಪಾತವಾಗುತ್ತಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ತಡೆಯುವಲ್ಲಿ ವಿಶ್ವಸಂಸ್ಥೆ ವಿಫಲವಾಗಿದೆ. ಭಾರತ ಆಕ್ರಮಿತ ಕಾಶ್ಮೀರದಲ್ಲಿ ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿದೆ. ಸ್ವಾತಂತ್ರ್ಯಕ್ಕಾಗಿ ದನಿ ಎತ್ತುತ್ತಿರುವ ಅಮಾಯಕರ ಬಲಿಯಾಗುತ್ತಿದೆ. ಆದರೆ ಇಂತಹಾ ಪರಿಸ್ಥಿತಿಯನ್ನು ನಿಯಂತ್ರಿಸಬೇಕಾದ ವಿಶ್ವಸಂಥೆ ಹಾಗೂ ಇತರೆ ಅಂತರಾಷ್ಟ್ರೀಯ ಸಂಸ್ಥೆಗಳು ಮಾತ್ರ ಎಲ್ಲಿದೆ ಎನ್ನುವುದು ತಿಳಿಯುತ್ತಿಲ್ಲ. ಟ್ವೀಟ್ ನಲ್ಲಿ ಕ್ರಿಕೆಟಿಗ ಹೇಳಿದ್ದಾರೆ.
ಏ.1ರಂದು ಕಾಶ್ಮೀರದಲ್ಲಿ ನಡೆದ ಹಿಂಸಾಚರದಲ್ಲಿ 13 ಉಗ್ರರು ಸೇರಿದಂತೆ 20 ಮಂದಿ ಸಾವನ್ನಪ್ಪಿದ್ದ ಘಟನೆ ಬೆನ್ನಲ್ಲಿ ಆಫ್ರಿದಿ ಈ ಟ್ವೀಟ್ ಮಾಡಿದ್ದಾರೆ.
ಆಫ್ರಿದಿ ಅವರ ಈ ಟ್ವಿಟ್ ಗೆ ಭಾರತೀಯರಿಂದ ಖಾರದ ಪ್ರತಿಕ್ರಿಯೆಗಳು ಬಂದಿದ್ದರೆ ಪಾಕಿಸ್ಥಾನೀಯರಿಂದ ಬೆಂಬಲ ವ್ಯಕ್ತವಾಗಿದೆ.
ಮಾಜಿ ಕ್ರಿಕೆಟಿಗ ಈ ಹಿಂದೆ ಸಹ ಕಾಶ್ಮೀರ ವಿಚಾರವನ್ನು ಕೆಣಕುವಂತೆ ಟ್ವೀಟ್ ಮಾಡಿದ್ದರು. 2016ರ ಮಾರ್ಚ್‌ರಲ್ಲಿ ಮೊಹಾಲಿಯಲ್ಲಿ ಆಸೀಸ್ ವಿರುದ್ದದ ಟಿ20 ಪಂದ್ಯ ನಡೆದ ವೇಳೆ "ಪಾಕ್ ತಂಡವನ್ನು ಬೆಂಬಲಿಸಿದ ಕಾಶ್ಮೀರೀ ಅಭಿಮಾನಿಗಳಿಗೆ ಧನ್ಯವಾದಗಳು' ಎಂದು ಟ್ವಿಟ್ ಮಾಡಿದ್ದರು.