ಬಿಸಿಸಿಐ ಮಾಧ್ಯಮ ಪ್ರಸಾರ ಹಕ್ಕು ಸ್ಟಾರ್ ಇಂಡಿಯಾ ಪಾಲು
ಮುಂಬೈ: ಮುಂದಿನ ಐದು ವರ್ಷಗಳಲ್ಲಿ ನಡೆಯಲಿರುವ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳ ಮಾದ್ಯಮ ಹಕ್ಕುಗಳನ್ನು ಬ್ರಾಡ್ ಕಾಸ್ಟಿಂಗ್ ದೈತ್ಯ ಸಂಸ್ಥೆಯಾದ ಸ್ಟಾರ್ ಇಂಡಿಯಾ ತನ್ನದಾಗಿಸಿಕೊಂಡಿದೆ.
2018ರಿಂದ 2023ರ ವರೆಗೆನಡೆಯುವ ಎಲ್ಲಾ ದ್ವಿಪಕ್ಷೀಯ ಕ್ರಿಕೆಟ್ ಪಂದ್ಯಗಳ ಪ್ರಸಾರದ ಹಕ್ಕಿಗಾಗಿ ಸಂಥೆಯು 6138.1 ಕೋಟಿ ರೂಪಾಯಿ (ಅಂದಾಜು 944 ಮಿಲಿಯನ್ ಡಾಲರ್) ಪಾವತಿಸಿದೆ.
ಭಾರತದ ತವರು ನೆಲದಲ್ಲಿ ನಡೆಯುವ ಪಂದ್ಯಗಳೊಡನೆ ಐಪಿಎಲ್ ಪಂದ್ಯಗಳ ಪ್ರಸಾರದ ಹಕ್ಕನ್ನೂ ಸಹ ಸ್ಟಾರ್ ಇಂಡಿಯಾ ತನ್ನದಾಗಿಸಿಕೊಂಡಿದ್ದು ಐಪಿಎ;ಲ್ ಗಾಗಿ ದಾಖಲೆಯ 16,347 ಕೋಟಿ ರೂ.(2.55 ಶತಕೋಟಿ ಯುಎಸ್ ಡಾಲರ್) ಬಿಡ್ ಮಾಡಿದೆ. ಇದರೊಡನೆ ಸಂಸ್ಥೆಯು ಕ್ರಿಕೆಟ್ ಪ್ರಸಾರ ಜಗತ್ತಿನಲ್ಲಿ ತನ್ನ ಏಕಸ್ವಾಮ್ಯವನ್ನು ಸ್ಥಾಪಿಸಿದಂತಾಗಿದೆ.
ಸ್ಟಾರ್ ಇಂಡಿಯಾವು ಐಸಿಸಿ ನಡೆಸುವ ಎಲ್ಲಾ (ಪುರುಷ ಹಾಗೂ ಮಹಿಳಾ) 50ಓವರ್ ವಿಶ್ವ ಕಪ್, ವಿಶ್ವ ಟಿ 20ಪ್ರಸಾರದ ಹಕ್ಕನ್ನು ಸಹ ತನ್ನದಾಗಿಸಿಕೊಂಡಿದೆ.
ಇದೇ ಮೊದಲ ಬಾರಿಗೆ ಮಾಧ್ಯಮ ಹಕ್ಕುಗಳ ವಿತರಣೆಗಾಗಿ ಇ-ಹರಾಜು ಬಿಡ್ ಅನ್ನು ಬಿಸಿಸಿಐ ಆಯೋಜಿಸಿದ್ದು ಇದರಲ್ಲಿ ಸ್ಟಾರ್ ಇಂಡಿಯಾದೊಡನೆ ಸೋನಿ ಹಾಗೂ ಜಿಯೊ ಟಿವಿಗಳೂ ಭಾಗವಹಿಸಿದ್ದವು. ಆದರೆ ತನ್ನ ಪ್ರತಿಸ್ಪರ್ಧಿಗಳನ್ನೆಲ್ಲಾ ಹಿಂದಿಕ್ಕಿ ಸ್ಟಾರ್ ಇಂಡಿಯಾ ಬಿಸಿಸಿಐನೊಂದಿಗೆ ಇನ್ನೊಮ್ಮೆ ಬಿಲಿಯನ್ ಡಾಲರ್ ಒಪ್ಪಂದವನ್ನು ಕುದುರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಹಿಂದೆ 2012ರಲ್ಲಿ ಸಹ ಸ್ಟಾರ್ ಟಿವಿ 3,851 ಕೋಟಿ ರೂ.ಗಳ ಮೊತ್ತಕ್ಕೆ ಮಾಧ್ಯಮ ಹಕ್ಕನ್ನು ಪಡೆದುಕೊಂಡಿದ್ದಿತು.
ಕಳೆದ ಮೂರು ದಿನಗಳಿಂದ ಈ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು ಮೊದಲ ದಿನ 4442 ಕೋಟಿ ರೂ ಗೆ ಬಿಡ್ ಮುಕ್ತಾಯಗೊಂಡರೆ ನಿನ್ನೆ 6000 ಕೋಟಿ ರೂ. ಮೈಲಿಗಲ್ಲನ್ನು ತಲುಪಿತ್ತು.