ಮುಂಬೈ: ಐಪಿಎಲ್ 2018ರ ಟೂರ್ನಿಯಲ್ಲಿ ಪ್ರಬಲ ತಂಡವಾಗಿ ಗುರುತಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ 7 ವಿಕೆಟ್ ಗಳ ಹೀನಾಯ ಸೋಲು ಅನುಭವಿಸಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಮುಂಬೈ ತಂಡ ನೀಡಿದ 195 ರನ್ ಗಳ ಬೃಹತ್ ಗುರಿಯನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡ ಕೇವಲ 3 ವಿಕೆಟ್ ಕಳೆದುಕೊಂಡು ಸಾಧಿಸಿದೆ. ಬೃಹತ್ ಮೊತ್ತದ ಹೊರತಾಗಿಯೂ ಬೌಲಿಂಗ್ ನಲ್ಲಿ ತಿಣುಕಾಡಿದ ಮುಂಬೈ ಅಕ್ಷರಶಃ ವಿಕೆಟ್ ಕೀಳಲು ಪರದಾಡಿತು. ಡೆಲ್ಲಿ ಪರ ಆರಂಭಿಕ ಆಟಗಾರ ಜೇಸನ್ ರಾಯ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಅಜೇಯ 94 ರನ್ ಗಳಿಸುವ ಮೂಲಕ ದೆಹಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಜೇಸನ್ ರಾಯ್ ಗೆ ಉತ್ತಮ ಸಾಥ್ ನೀಡಿದ ರಿಷಬ್ ಪಂತ್ 47 ರನ್ ಗಳಿಸಿ ಔಟ್ ಆದರು.
ಅಂತಿಮವಾಗಿ ಶ್ರೇಯಸ್ ಅಯ್ಯರ್ ಜೊತೆಗೂಡಿದ ಜೇಸನ್ ರಾಯ್ ಗೆಲುವಿನ ಔಪಚಾರಿಕತೆಯನ್ನು ಮುಕ್ತಾಯಗೊಳಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತು. ಆರಂಭಿಕ ಆಟಗಾರ ಸೂರ್ಯ ಕುಮಾರ್ ಯಾದವ್ (53 ರನ್), ಎವಿನ್ ಲೂಯಿಸ್ (48 ರನ್), ಇಶಾನ್ ಕಿಶಾನ್ (44 ರನ್) ಅವರು ತಂಡ ಬೃಹತ್ ಮೊತ್ತ ಪೇರಿಸಲು ನೆರವಾದರು.
ಡೆಲ್ಲಿ ಪರ ಟ್ರೆಂಟ್ ಬೌಲ್ಟ್, ಡೇನಿಯಲ್ ಕ್ರಿಶ್ಚಿಯನ್ ಮತ್ತು ರಾಹುಲ್ ಟೆವತಿಯಾ ತಲಾ 2 ವಿಕೆಟ್ ಪಡೆದರೆ, ಮಹಮದ್ ಶಮಿ 1 ವಿಕೆಟ್ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics