ಬೆಂಗಳೂರು: ಇಂತಹ ಕಳಪೆ ಫೀಲ್ಡಿಂಗ್ ಮುಂದಿಟ್ಟುಕೊಂಡು ನಾವು ಸೆಮಿ ಫೈನಲ್ ಗೆ ಹೋಗುವುದು ಕಷ್ಟ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪ್ರಮುಖ ಪಂದ್ಯದಲ್ಲಿ ಆರ್ ಸಿಬಿ ಕಳಪೆ ಫೀಲ್ಡಿಂಗ್ ಮತ್ತು ಪ್ರಮುಖ ಕ್ಯಾಚ್ ಗಳನ್ನು ಕೈ ಚೆಲ್ಲುವ ಮೂಲಕ ಸೋಲು ಕಂಡಿತ್ತು. 175 ರನ್ ಗಳ ಕಠಿಣ ಸವಾಲು ಕೋಲ್ಕತಾಗೆ ಕೊಹ್ಲಿ ಪಡೆಯ ಕಳಪೆ ಫೀಲ್ಡಿಂಗ್ ನಿಂದಾಗಿ ದೊಡ್ಡ ಸವಾಲು ಎನಿಸಲೇ ಇಲ್ಲ. 19.1 ಓವರ್ ನಲ್ಲೇ ಕೆಕೆಆರ್ ಗೆಲುವಿನ ನಗೆ ಬೀರಿತು. ಇನ್ನು ತಂಡದ ಕಳಪೆ ಫೀಲ್ಡಿಂಗ್ ವಿರುದ್ಧ ನಾಯಕ ಕೊಹ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂತಹ ಕಳಪೆ ಫೀಲ್ಡಿಂಗ್ ಮುಂದಿಟ್ಟುಕೊಂಡು ಗೆಲುವು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಕೊಹ್ಲಿ ಆಟಗಾರರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ಕೋಲ್ಕತಾ ವಿರುದ್ಧ ಹಲವು ಕ್ಯಾಚ್ ಗಳನ್ನು ನಾವು ಕೈ ಚೆಲ್ಲಿದೆವು. ಇದೇ ನಮ್ಮ ಸೋಲಿಗೆ ಪ್ರಮುಖ ಕಾರಣವಾಯಿತು. ಗೆಲುವಿಗಾಗಿ ನಮ್ಮ ಶ್ರಮ ಸಾಲುತ್ತಿಲ್ಲ ಎಂದೆನಿಸುತ್ತಿದೆ. ಇಂತಹ ಫೀಲ್ಡಿಂಗ್ ಮುಂದುವರೆಕೆಯನ್ನು ನಾವು ನೋಡಬಯಸುವುದಿಲ್ಲ. ಸಿಂಗಲ್ ರನ್ ಗಳು ಬೌಂಡರಿಯಾಗಿ ಪರಿವರ್ತನೆಯಾದವು. ನಿಜ ಹೇಳಬೇಕು ಎಂದರೆ ಇಂದಿನ ಪಂದ್ಯವನ್ನು ನಾವೇ ನಮ್ಮ ಕೈಯ್ಯಾರೆ ಹಾಳು ಮಾಡಿಕೊಂಡೆವು ಎಂದು ಕೊಹ್ಲಿ ಹೇಳಿದ್ದಾರೆ.
ಪ್ರಸ್ತುತ ಸರಣಿಯಲ್ಲಿ ನಮ್ಮ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದ್ದು, ಮುಂದಿನ ಪ್ರತೀ ಪಂದ್ಯವನ್ನೂ ಗೆಲ್ಲಲೇ ಬೇಕಾದ ಅನಿವಾರ್ಯತೆಗೆ ಸಿಲುಕಿದ್ದೇವೆ. ಮುಂದಿನ ಏಳು ಪಂದ್ಯಗಳ ಪೈಕಿ ಆರು ಪಂದ್ಯಗಳನ್ನು ನಾವು ಗೆಲ್ಲಲೋ ಬೇಕು. ಅಂತಹ ಪರಿಸ್ಥಿತಿದೆ ನಾವು ಮೈಂಡ್ ಸೆಟ್ ಮಾಡಿಕೊಂಡು ಆಡಬೇಕಿದೆ. ಮುಂದಿನ ಪಂದ್ಯಗಳಲ್ಲಿ ನಮ್ಮ ವೈಫಲ್ಯಗಳನ್ನು ತಿಳಿದು ಅವುಗಳನ್ನು ದೂರ ಮಾಡಿ ಆಡಬೇಕು ಎಂದು ಕೊಹ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics