ಅಶ್ವಿನ್ ಬೌಲಿಂಗ್ ನಲ್ಲಿ ಔಟಾದ ಶಾನ್ ಮಾರ್ಷ್
ಅಡಿಲೇಡ್: ಆಸ್ಟ್ರೇಲಿಯಾ ತಂಡದ ಆಟಗಾರ ಶಾನ್ ಮಾರ್ಷ್ ಕ್ರಿಕೆಟ್ ಇತಿಹಾಸದಲ್ಲೇ ಯಾರಿಗೂ ಬೇಡವಾದ ಸುಮಾರು 130 ವರ್ಷಗಳಷ್ಟು ಹಳೆಯ ಕೆಟ್ಟ ದಾಖಲೆಯೊಂದನ್ನು ಮುರಿದಿದ್ದಾರೆ.
ಹೌದು.. ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ 3 ವಿಕೆಟ್ ಪಡೆಯುವ ಮೂಲಕ ತಾವು ಟೆಸ್ಟ್ ತಂಡದ ನಂ.1 ಸ್ಪಿನ್ನರ್ ಎಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಅಲ್ಲದೇ ಆಸ್ಟ್ರೇಲಿಯಾ ತಂಡದ ಶಾನ್ ಮಾರ್ಷ್ 130 ವರ್ಷಗಳ ಬಳಿಕ ಕೆಟ್ಟ ದಾಖಲೆ ಬರೆಯಲು ಕಾರಣರಾಗಿದ್ದಾರೆ. ಅಶ್ವಿನ್ ಪಂದ್ಯದಲ್ಲಿ ಆಸೀಸ್ ತಂಡದ ಪ್ರಮುಖ ಮೂವರು ಬ್ಯಾಟ್ಸ್‍ಮನ್‍ಗಳನ್ನು ಬಲಿ ಪಡೆದಿದ್ದು, ಇದರಲ್ಲಿ ಶಾನ್ ಮಾರ್ಷ್ ರನ್ನು ಕೇವಲ 2 ರನ್ ಗಳಿಗೆ ಪೆವಿಲಿಯನ್‍ಗೆ ಅಟ್ಟಿದ್ದರು. ಈ ಮೂಲಕ ಆಸೀಸ್ ಕ್ರಿಕೆಟ್ ಇತಿಹಾಸದಲ್ಲಿ ಮಾರ್ಷ್ ಕೆಟ್ಟ ದಾಖಲೆ ಬರೆಯಲು ಅಶ್ವಿನ್ ಕಾರಣರಾದರು.
ಆ ಮೂಲಕ ಶಾನ್ ಮಾರ್ಷ್ ಸತತವಾಗಿ 6 ಬಾರಿ ಎರಡಂಕಿ ಮೊತ್ತ ಗಳಿಸದೇ ಔಟಾಗಿದ್ದಾರೆ. 1888ರ ಬಳಿಕ ಆಸೀಸ್‍ನ ಟಾಪ್ ಐವರು ಬ್ಯಾಟ್ಸ್‍ಮನ್‍ಗಳಲ್ಲಿ ಯಾರು ಇಷ್ಟು ಬಾರಿ ಒಂದಂಕಿಗೆ ಔಟಾಗಿರಲಿಲ್ಲ. ಸತತವಾಗಿ ಬ್ಯಾಟಿಂಗ್ ನಲ್ಲಿ ಫೇಲ್ ಆಗುತ್ತಿರುವ ಮಾರ್ಷ್ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೇ ಮಾರ್ಷ್ ಆಡಿರುವ ಇತ್ತೀಚಿನ 13 ಟೆಸ್ಟ್ ಪಂದ್ಯಗಳಲ್ಲಿ 40 ರನ್ ಗಳಿಗಿಂತ ಹೆಚ್ಚು ಮೊತ್ತವನ್ನು ಗಳಿಸಿಲ್ಲ. ಉಳಿದಂತೆ ಆಸೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದ ಆಟದ ವೇಳೆ ಟೀಂ ಇಂಡಿಯಾದ ಇಶಾಂತ್ ಶರ್ಮಾ, ಬುಮ್ರಾ, ಅಶ್ವಿನ್ ತಮ್ಮ ಮಿಂಚಿನ ಬೌಲಿಂಗ್ ನಡೆಸಿದ್ದಾರೆ. ಪಂದ್ಯದಲ್ಲಿ 50 ರನ್ ನೀಡಿ ಅಶ್ವಿನ್ 3 ವಿಕೆಟ್ ಪಡೆದರೆ, ಇಶಾಂತ್ ಶರ್ಮಾ, ಬುಮ್ರಾ ತಲಾ 2 ವಿಕೆಟ್ ಪಡೆದರು. 2ನೇ ದಿನದಾಟದ ಅಂತ್ಯಕ್ಕೆ ಆಸೀಸ್ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದೆ.