ಪರ್ತ್: ನಾಯಕ ವಿರಾಟ್ ಕೊಹ್ಲಿ ಮಾಡಿದ ಎಡವಟ್ಟಿನಿಂದಾಗಿ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋಲು ಕಾಣುವ ಸಾಧ್ಯತೆ ಇದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಪರ್ತ್ ಕ್ರೀಡಾಂಗಣದ ಪಿಚ್ ಬಗ್ಗೆ ಮಾತನಾಡಿದ್ದ ವಾನ್ ಇದೇ ಪಿಚ್ ಕುರಿತಂತೆ ಹಾಗೂ ಟಾಸ್ ಬಳಿಕ ಕೊಹ್ಲಿ ಕೈಗೊಂಡ ನಿರ್ಧಾರವನ್ನು ಟೀಕಿಸಿದ್ದಾರೆ. ಮೊದಲ ಟೆಸ್ಟ್ ನಲ್ಲಿ ಸೋಲು ಕಂಡಿರುವ ಆಸಿಸ್ ಪಡೆ 2ನೇ ಟೆಸ್ಟ್ ನಲ್ಲಿ ಶತಾಯಗತಾಯ ಗೆಲುವು ಸಾಧಿಸಬೇಕು ಎಂದು ಪಿಚ್ ಮೇಲೆ ಗ್ರೀನ್ ಟಾಪ್ ಹಾಕುವಂತೆ ಪಿಚ್ ಕ್ಯುರೇಟರ್ ಗೆ ಸೂಚಿಸಿತ್ತು. ಅದರಂತೆ ಪಿಚ್ ಕ್ಯುರೇಟರ್ ಪಿಚ್ ಮೇಲೆ ಗ್ರೀನ್ ಟಾಪ್ ಹೊದಿಸಿದ್ದಾರೆ. ಆದರೆ ಈ ಪಿಚ್ ನ ಮರ್ಮವನ್ನು ಅರ್ಥ ಮಾಡಿಕೊಳ್ಳುವಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಹಾಗೂ ಕೋಚ್ ರವಿಶಾಸ್ತ್ರಿ ವಿಫಲರಾಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಅಂತೆಯೇ ಪಿಚ್ ಮರ್ಮ ಅರ್ಥವಾಗಿದ್ದರೆ ಕೊಹ್ಲಿ ಖಂಡಿತಾ ರವೀಂದ್ರ ಜಡೇಜಾರಂತಹ ಅನುಭವಿ ಸ್ಪಿನ್ನರ್ ರನ್ನು ತಂಡದಿಂದ ಕೈ ಬಿಡುತ್ತಿರಲಿಲ್ಲ. ಕೊಹ್ಲಿ ಈ ನಿರ್ಧಾರ ಖಂಡಿತಾ ನನಗೆ ಅಚ್ಚರಿ ಮೂಡಿಸಿದೆ. ಕೇವಲ ಸ್ಪಿನ್ನರ್ ಆಗಿ ಮಾತ್ರವಲ್ಲ ಜಡೇಜಾ ಓರ್ವ ಆಲ್ ರೌಂಡರ್ ಆಟಗಾರನಾಗಿಯೂ ಗುರುತಿಸಿಕೊಂಡಿದ್ದಾರೆ. ನನ್ನ ಪ್ರಕಾರ 8ನೇ ಕ್ರಮಾಂಕಕ್ಕೆ ಜಡೇಜಾ ಸೂಕ್ತ ಆಟಗಾರ. ಆದರೆ ಜಡೇಜಾ ಅನುಪಸ್ಥಿತಿ ಖಂಡಿತಾ ಟೀಂ ಇಂಡಿಯಾವನ್ನು ಕಾಡಲಿದೆ ಎಂದು ವಾನ್ ಟ್ವೀಟ್ ಮಾಡಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸಿಸ್ ತಂಡ ಒಬ್ಬ ಸ್ಪಿನ್ನರ್ ಅನ್ನು ಕಣಕ್ಕಿಳಿಸಿತ್ತು. ಆದರೆ, ಟೀಂ ಇಂಡಿಯಾದಲ್ಲಿ ಸ್ಪೆಷಲಿಸ್ಟ್ ಸ್ಪಿನ್ನರ್ಗಳೇ ಇಲ್ಲ. ಕೊಹ್ಲಿ ಸೇನೆಯ ಪಾರ್ಟ್ ಟೈಮ್ ಸ್ಪಿನ್ನರ್ ಹನುಮ ವಿಹಾರಿ ಪರ್ತ್ ಟೆಸ್ಟ್ನ ಮೊದಲನೇ ದಿನವೇ 2 ವಿಕೆಟ್ ಪಡೆದು ಪರ್ತ್ ಪಿಚ್ ಸ್ಪಿನ್ಗೆ ನೆರವಾಗುತ್ತಿದೆ ಎಂಬುದನ್ನು ತೋರಿಸಿಕೊಟ್ಟರು. ಪ್ರಾರಂಭದಲ್ಲಿ ಪರ್ತ್ ಪಿಚ್ ವೇಗಿಗಳಿಗೆ ಫ್ರೆಂಡ್ಲಿ ಆಗಿದೆ ಎಂದು ಹೇಳಲಾಗ್ತಿತ್ತು. ಹೀಗಾಗಿಯೇ ಟೀಂ ಇಂಡಿಯಾ ಪ್ರಮುಖ ಸ್ಪಿನ್ನರ್ ಗಳನ್ನು ಬೆಂಚ್ ಕಾಯಿಸಿ, ವೇಗಿಗಳ ಮೊರೆ ಹೋಗಿದ್ದಾರೆ. ಆದರೆ, ಮಹಮ್ಮದ್ ಶಮಿ ಎಸೆತ ಎದುರಾಳಿ ಬ್ಯಾಟ್ಸ್ ಮನ್ನ ಮೊಣಕಾಲಿನ ಮೇಲೂ ಹೋಗುತ್ತಿರಲಿಲ್ಲ. ಇದು ನಾಯಕ ಹಾಗೂ ಕೋಚ್ ಯೋಜನೆಯ ಪ್ರಾರಂಭಿಕ ವಿಫಲ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics