ಮೆಲ್ಬೋರ್ನ್: ಆಸ್ಚ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಅಂತ್ಯವಾಗಿದ್ದು, ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಕೇವಲ 54 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಕೇವಲ 151 ರನ್ ಗಳಿಗೆ ಕಟ್ಟಿಹಾಕಿದ್ದ ಕೊಹ್ಲಿ ಪಡೆ, ಎರಡನೇ ಇನ್ನಿಂಗ್ಸ್ ಆರಂಭಿಸಿತು. ಆದರೆ ಆಸಿಸ್ ವೇಗಿ ಪ್ಯಾಟ್ ಕಮಿನ್ಸ್ ದಾಳಿ ತತ್ತರಿಸಿದ ಟೀಂ ಇಂಡಿಯಾ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ಮೊದಲ ಇನ್ನಿಂಗ್ಸ್ ನಲ್ಲಿ ವಿಫಲರಾದ ಹನುಮ ವಿಹಾರಿ ಎರಡನೇ ಇನ್ನಿಂಗ್ಸ್ ನಲ್ಲೂ ಕೇವಲ 13 ರನ್ ಗಳಿಸಿ ಕಮಿನ್ಸ್ ಬೌಲಿಂಗ್ ನಲ್ಲಿ ಔಟ್ ಆದರು. ಆ ಬಳಿಕ ಬಂದ ಪೂಜಾರ ಶೂನ್ಯ ಸುತ್ತಿದರೆ, ನಾಯಕ ಕೊಹ್ಲಿ ಕೂಡ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಶೂನ್ಯಕ್ಕೆ ಔಟ್ ಆಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.
ರಹಾನೆ ಒಂದಂಕಿ ರನ್ ಗಳಿಸಿ ಔಟ್ ಆದರೆ, ರೋಹಿತ್ ಶರ್ಮಾ ಕೂಡ ಕೇವಲ 5 ರನ್ ಗಳಿ ಔಟ್ ಆದರು. ಒಟ್ಟಾರೆ ದಿನದಾಟದ ಅಂತ್ಯಕ್ಕೆ ಭಾರತ ಕೇವಲ 54 ರನ್ ಗಳಿಗೆ ತನ್ನ ಐದು ವಿಕೆಟ್ ಕಳೆದುಕೊಂಡಿದ್ದು, ಮೊದಲ ಇನ್ನಿಂಗ್ಸ್ ಹೀರೋ ಮಯಾಂಕ್ ಅಗರ್ವಾಲ್ (ಅಜೇಯ 28 ರನ್) ಮತ್ತು ರಿಷಬ್ ಪಂತ್ (ಅಜೇಯ 6 ರನ್) ನಾಳೆಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್ ನ 292 ರನ್ ಗಳೂ ಸೇರಿದಂತೆ ಟೀಂ ಇಂಡಿಯಾ ಒಟ್ಟಾರೆ 346 ರನ್ ಗಳ ಮುನ್ನಡೆ ಪಡೆದುಕೊಂಡಿದೆ. ನಾಳೆ ಆಟ ನಿರ್ಣಾಯಕವಾಗಲಿದ್ದು, ನಾಳೆ ಭಾರತ ಕನಿಷ್ಟ 150 ರನ್ ಗಳನ್ನು ಗಳಿಸಿದರೆ, ಆಸಿಸ್ ಗೆ ಬೃಹತ್ ಮೊತ್ತದ ಗುರಿ ನೀಡಲು ಸಾಧ್ಯವಾಗುತ್ತದೆ.
ಇನ್ನು ಆಸ್ಟ್ರೇಲಿಯಾ ಪರ ಪ್ಯಾಟ್ ಕಮಿನ್ಸ್ 4 ವಿಕೆಟ್ ಪಡೆದು ಮಿಂಚಿದರೆ, ಹೇಜಲ್ ವುಡ್ 1 ವಿಕೆಟ್ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics