ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಮಾಜಿ ಕ್ರಿಕೆಟ್ ಆಟಗಾರ ಎಸ್. ಶ್ರೀಶಾಂತ್ ಅವರಿಗೆ ಜೀವನ ಪರ್ಯಂತ ನಿಷೇಧಕ್ಕೆ ಸಂಬಂಧಿಸಿದಂತೆ ಬಿಸಿಸಿಐ(ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಪ್ರತಿಕ್ರಿಯಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಈ ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ. ಖನ್ವಿಲ್ಕರ್ ಮತ್ತು ಡಿ. ವೈ. ಚಂದ್ರಚೂಡ್ ಅವರಿದ್ದ ಪೀಠ, ನಾಲ್ಕು ವಾರಗಳಲ್ಲಿ ಬಿಸಿಸಿಐ ಪ್ರತಿಕ್ರಿಯಿಸುವಂತೆ ಸೂಚಿಸಿದೆ.
ಬಿಸಿಸಿಐ ಪ್ರತಿಕ್ರಿಯೆ ಬಂದ ನಂತರ ನಾಲ್ಕುವಾರಗಳಲ್ಲಿ ಅರ್ಜಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಶ್ರಿಶಾಂತ್ ಗೆ ತಿಳಿಸಿದ್ದು,ಬಿಸಿಸಿಐ ಪರ ವಕೀಲ ಪರಾಗ್ ತ್ರಿಪಾಠಿ ಸುಪ್ರೀಂಕೋರ್ಟ್ ನೀಡಿದ ನೋಟಿಸ್ ನ್ನು ಸ್ವೀಕರಿಸಿದ್ದಾರೆ.
ಶ್ರೀಶಾಂತ್ ಅವರಿಗೆ ಜೀವನ ಪರ್ಯಂತ ಕ್ರಿಕೆಟ್ ಆಡದಂತೆ ನಿರ್ಬಂಧಿಸಿರುವುದು ಅನ್ಯಾಯಯುತವಾದದ್ದು, ಸಾಕ್ಷಿ ಪೂರವೆಗಳ ಕೊರೆತೆಯಿಂದಾಗಿ ವಿಚಾರಣಾ ನ್ಯಾಯಾಲಯದಿಂದ ಶ್ರೀಶಾಂತ್ ಕ್ರಿಮಿನಲ್ ಕೇಸ್ ಎದುರಿಸಬೇಕಾಗಿದೆ ಎಂದು ಶ್ರೀಶಾಂತ್ ಪರ ವಕೀಲ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.