ಕ್ರಿಕೆಟ್

ಕೆಳ ಕ್ರಮಾಂಕದಲ್ಲಿ ಧೋನಿ ಬ್ಯಾಟಿಂಗ್ ಗೆ ಕೊಹ್ಲಿಯ ಭಯ ಕಾರಣ: ವಿರೇಂದ್ರ ಸೆಹ್ವಾಗ್

Srinivasamurthy VN
ನವದೆಹಲಿ: ಪದೇ ಪದೇ  ಮುಗ್ಗರಿಸುತ್ತಿರುವ ಭಾರತ ತಂಡದ ಮಧ್ಯಮ ಕ್ರಮಾಂಕ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರ ಕೆಳ ಕ್ರಮಾಂಕದ ಬ್ಯಾಟಿಂಗ್ ಗೆ ನಾಯಕ ವಿರಾಟ್ ಕೊಹ್ಲಿಯ ಭಯ ಕಾರಣ ಎಂದು ಭಾರತ ತಂಡದ ಮಾಜಿ  ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡದ ಮಾಜಿ ನಾಯಕ ಮತ್ತು ಅತ್ಯುತ್ತಮ ಫಿನಿಷರ್ ಎಂದು ಖ್ಯಾತಿ ಪಡೆದಿರುವ ಮಹೇಂದ್ರ ಸಿಂಗ್ ಧೋನಿಯನ್ನು ಕೆಳ ಕ್ರಮಾಂಕದಲ್ಲಿ ಆಡಿಸಲು ವಿರಾಟ್ ಕೊಹ್ಲಿ ಅವರ ಭಯ ಕಾರಣ ಎಂದು ಸೆಹ್ವಾಗ್ ಹೇಳಿದ್ದಾರೆ.  ಸೆಹ್ವಾಗ್ ಅಭಿಪ್ರಾಯಪಟ್ಟಿರುವಂತೆ ಪ್ರಸ್ತುತ ಭಾರತ ತಂಡದಲ್ಲಿ ಉದಯೋನ್ಮುಖ ಆಟಗಾರರಿದ್ದರೂ, ತಂಡದಲ್ಲಿ ಉತ್ತಮ ಫಿನಿಷರ್ ಗಳಿಲ್ಲ. ಹೀಗಾಗಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೆಳ ಕ್ರಮಾಂಕದಲ್ಲಿ  ಕೊಹ್ಲಿ  ಆಡಿಸುತ್ತಿದ್ದಾರೆ. ಆದರೆ ಧೋನಿ ಅವರನ್ನು ಕೆಳ ಕ್ರಮಾಂಕದಲ್ಲಿ ಆಡಿಸಿದ ಮಾತ್ರಕ್ಕೆ ತಂಡ ಬ್ಯಾಟಿಂಗ್ ಆರ್ಡರ್ ಸಮಸ್ಯೆ ಬಗೆಹರಿಯುತ್ತದೆ ಎಂದು ಭಾವಿಸುವಂತಿಲ್ಲ.
ಪ್ರಮುಖವಾಗಿ ಕೊಹ್ಲಿ ತಂಡದ ಬ್ಯಾಟಿಂಗ್ ಆರ್ಡರ್ ಸಮಸ್ಯೆಯನ್ನು ನೀಗಿಸಿಕೊಂಡು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ, ಕೇದಾರ್ ಜಾದವ್ ಮತ್ತು ಮನೀಷ್ ಪಾಂಡೆಯಂತಹ ಆಟಗಾರರನ್ನು ಫಿನಿಷರ್ ಗಳಾಗಿ ರೂಪಿಸಬೇಕು.  ಆಗ ತಂಡದ ಬ್ಯಾಟಿಂಗ್ ಆರ್ಡರ್ ಸಮಸ್ಯೆ ನೀಗುತ್ತದೆ. ಧೋನಿಗೂ ಕೂಡ ಉತ್ತಮ ಬ್ಯಾಟಿಂಗ್ ಮಾಡುವ ಅವಕಾಶ ಲಭಿಸುತ್ತದೆ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ಸೆಹ್ವಾಗ್ ಪ್ರಕಾರ ಮಹೇಂದ್ರ ಸಿಂಗ್ ಧೋನಿ ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕಂತೆ. ನಾಲ್ಕನೇ ಕ್ರಮಾಂಕದಲ್ಲಿ ಧೋನಿ ಅತ್ಯುತ್ತಮ ಆಟಗಾರರಾಗಿದ್ದು, ಇದೇ ಕ್ರಮಾಂಕದಲ್ಲಿ ಅವರನ್ನು ಆಡಿಸುವುದು ಸೂಕ್ತ ಎಂದು ಸೆಹ್ವಾಗ್  ಹೇಳಿದ್ದಾರೆ. 
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕೊಹ್ಲಿ ನಾಯಕತ್ವ ಸೂಪರ್!
ಇನ್ನು ಇದೇ ವೇಳೆ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಕೊಹ್ಲಿ ಅವರ ನಾಯಕತ್ವ ಕೊಂಡಾಡಿದ ವೀರೂ, ಆರೂ ಪಂದ್ಯಗಳನ್ನು ನಾನು ವೀಕ್ಷಿಸಿದ್ದೇನೆ. ಪ್ರತಿಯೊಂದು ಪಂದ್ಯದಲ್ಲೂ ಕೊಹ್ಲಿ ಅತ್ಯುತ್ತಮ ನಾಯಕತ್ವ ಪ್ರದರ್ಶನ  ಮಾಡಿದರು. ಸೂಕ್ತ ಸಂದರ್ಭಗಳಲ್ಲಿ ಸೂಕ್ತ ನಿರ್ಣಯ ಮತ್ತು ಬೌಲಿಂಗ್ ಬದಲಾಣೆ ಮಾಡುತ್ತ ಎದುರಾಳಿ ತಂಡದ ಬ್ಯಾಟ್ಸಮನ್ ಗಳನ್ನು ಕಟ್ಟಿಹಾಕಿದರು. ಕೊಹ್ಲಿಗೆ ಚಾಹಲ್ ಮತ್ತು ಕುಲದೀಪ್ ಯಾದವ್ ಉತ್ತಮ ಸಾಥ್ ನೀಡಿದರು  ಎಂದು ಸೆಹ್ವಾಗ್ ಹೇಳಿದ್ದಾರೆ.
SCROLL FOR NEXT