'ಧೋನಿಯಿಂದ ಯಾರಾದರೂ ಅತೀ ಹೆಚ್ಚು ಲಾಭ ಪಡೆದಿದ್ದಾರೆ ಎಂದರೆ ಅದು ವಿರಾಟ್ ಕೊಹ್ಲಿ ಮಾತ್ರ'
ಭಾರತ ತಂಡದ ಯಶಸ್ಸು ಮತ್ತು ಹಾಲಿ ಉತ್ತಮ ಸ್ಥಿತಿಗೆ ಮಾಜಿ ನಾಯಕ ಹಾಗೂ ಹಾಲಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಕಾರಣ ಎಂದು ಮಾಜಿ ಕ್ರಿಕೆಟಿಗ ಕಿರಣ್ ಮೋರೆ ಹೇಳಿದ್ದಾರೆ.
ನವದೆಹಲಿ: ಭಾರತ ತಂಡದ ಯಶಸ್ಸು ಮತ್ತು ಹಾಲಿ ಉತ್ತಮ ಸ್ಥಿತಿಗೆ ಮಾಜಿ ನಾಯಕ ಹಾಗೂ ಹಾಲಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಕಾರಣ ಎಂದು ಮಾಜಿ ಕ್ರಿಕೆಟಿಗ ಕಿರಣ್ ಮೋರೆ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಕಿರಣ್ ಮೋರೆ, ಪ್ರಸ್ತುತ ಸರಣಿಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಅವರಿಂದ ಅತ್ಯುತ್ತಮ ಎನ್ನಬಹುದಾದ ಪ್ರದರ್ಶನಗಳು ಬರದೇ ಇರಬಹುದು. ಆದರೆ ಭಾರತ ತಂಡದ ಈಗಿನ ಸ್ಥಿತಿಗೆ ಮತ್ತು ಯಶಸ್ಸಿಗೆ ಮಹೇಂದ್ರ ಸಿಂಗ್ ಧೋನಿ ಅವರೇ ಕಾರಣ. ನನ್ನ ಪ್ರಕಾರ ಹೇಳುವುದಾದರೆ ಭಾರತ ತಂಡದಲ್ಲಿ ಎಂ ಎಸ್ ಧೋನಿ ಅತ್ಯಂತ ಪ್ರಮುಖ ಆಟಗಾರರಾಗಿದ್ದಾರೆ. ಇದರಲ್ಲಿ ಯಾವುದೇ ಸಂಶಯ ಇಲ್ಲ. ಏಕೆಂದರೆ ತಂಡದ ಇತರೆ ಆಟಗಾರರಿಗೆ ಧೋನಿ ಸ್ಪೂರ್ತಿಯಾಗಿದ್ದು, ಅಗತ್ಯ ಸಂದರ್ಭಗಳಲ್ಲಿ ನಾಯಕ ಕೊಹ್ಲಿ ಸೇರಿದಂತೆ ಇತರೆ ಆಟಗಾರರು ಧೋನಿ ಬಳಿ ಸಲಹೆ ಕೇಳುತ್ತಾರೆ.
ವಿಕೆಟ್ ಹಿಂದೆ ಧೋನಿ ಇದ್ದಾರೆ ಎಂಬ ಕಾರಣಕ್ಕೇ ಭಾರತದ ಬೌಲರ್ ಗಳು ಒತ್ತಡ ವಿಲ್ಲದೇ, ಸಕಾರಾತ್ಮಕವಾಗಿ ಬೌಲಿಂಗ್ ಮಾಡಿ ಯಶಸ್ಸು ಸಾಧಿಸುತ್ತಿದ್ದಾರೆ. ಇದಕ್ಕೆ ಭಾರತದ ಸ್ಪಿನ್ನರ್ ಗಳಾದ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಅವರ ಯಶಸ್ಸು ಉತ್ತಮ ಉದಾಹರಣೆಯಾಗಿದೆ. ಇವರು ಗಳಿಸಿದ ವಿಕೆಟ್ ಗಳಲ್ಲಿ ಧೋನಿ ಸ್ಟಂಪಿಂಗ್, ಕ್ಯಾಚ್ ಮತ್ತು ರನೌಟ್ ಗಳ ಸಿಂಹಪಾಲಿದೆ. ಅಗತ್ಯ ಸಂದರ್ಭಗಳಲ್ಲಿ ಬೌಲರ್ ಗಳಿಗೆ ಸೂಕ್ತ ಸಲಹೆ ನೀಡಿ ಬೌಲರ್ ಗಳು ಯಶಸ್ಸು ಗಳಿಸುವಂತೆ ಧೋನಿ ಮಾಡುತ್ತಾರೆ.
ಧೋನಿ ತಂಡದ ಪರವಾಗಿ ಮೈದಾನದಲ್ಲಿದ್ದರೆ ಸಾಕು. ತಂಡದಲ್ಲಿ ತಾನೇ ತಾನಾಗಿ ಸ್ಪೂರ್ತಿ ಹರಿದಿರುತ್ತದೆ. ಧೋನಿಯಿಂದಾಗಿ ಭಾರತ ತಂಡದಲ್ಲಿ ಅತೀ ಹೆಚ್ಚು ಲಾಭ ಪಡೆದ ಆಟಗಾರರು ಇದ್ದಾರೆ ಎಂದರೆ ಅದು ವಿರಾಟ್ ಕೊಹ್ಲಿ ಮಾತ್ರ. ನಾಯಕನಾಗಿ ಆಯ್ಕೆಯಾಗುವುದಕ್ಕೂ ಮೊದಲಿನಿಂದಲೂ ವಿರಾಟ್ ಧೋನಿಯಿಂದ ಸಾಕಷ್ಟು ಪಾಠ ಕಲಿತಿದ್ದಾರೆ. ನಾಯಕನಾದ ಬಳಿಕವೂ ಅಗತ್ಯ ಸಂದರ್ಭಗಳಲ್ಲಿ ಕೊಹ್ಲಿ ಧೋನಿ ಬಳಿ ಸಲಹೆ ಪಡೆದಿದ್ದಾರೆ. ಇದೇ ಪ್ರಸ್ತುತ ಭಾರತ ತಂಡದ ಯಶಸ್ಸಿಗೆ ಕಾರಣ ಎಂದು ನನಗನ್ನಿಸುತ್ತದೆ. ಧೋನಿ ಭಾರತ ಕ್ರಿಕೆಟ್ ತಂಡದ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದು ಮಾಜಿ ವಿಕೆಟ್ ಕೀಪರ್ ಕೂಡ ಆಗಿರುವ ಕಿರಣ್ ಮೋರೆ ಶ್ಲಾಘಿಸಿದ್ದಾರೆ.