ಹರ್ಷಲ್ ಗಿಬ್ಸ್-ಆರ್ ಅಶ್ವಿನ್
ನವದೆಹಲಿ: ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಹರ್ಷಲ್ ಗಿಬ್ಸ್ ರೊಂದಿಗೆ ಅನಗತ್ಯ ವಿವಾದ ಸೃಷ್ಟಿಸಿಕೊಂಡಿದ್ದ ಟೀಂ ಇಂಡಿಯಾ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಇದೀಗ ಗಿಬ್ಸ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದು ಇದು ಟ್ವೀಟರಿಗರ ಟ್ರೋಲ್ ಗೆ ಕಾರಣವಾಗಿದೆ.
ಕ್ಷುಲಕ ಕಾರಣಕ್ಕೆ ಮ್ಯಾಚ್ ಫಿಕ್ಸಿಂಗ್ ಪ್ರಸ್ತಾಪಿಸಿ ಟೀಕೆಗೆ ಗುರಿಯಾಗಿದ್ದ ಅಶ್ವಿನ್ ತೇಪೆ ಹಚ್ಚಲು ಗಿಬ್ಲ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ ಇದೆಲ್ಲಾ ನಾಟಕ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಭಾರೀ ಟ್ರೋಲ್ ಮಾಡಿದ್ದಾರೆ.
ಈ ಹಿಂದೆ ಶೂ ಬ್ರ್ಯಾಂಡ್ ವೊಂದರ ಪ್ರಚಾರ ರಾಯಭಾರಿಯಾಗಿರುವ ಅಶ್ವಿನ್ ತಮ್ಮ ಹೊಸ ಬ್ರ್ಯಾಂಡ್ ಶೂ ಕುರಿತು ವಿಡಿಯೋವನ್ನು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದರು. 'ಈ ಶೂ ಹಾಕಿಕೊಂಡರೆ ಚುರುಕಾಗಿ ಓಡಬಹುದು' ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಹರ್ಷಲ್ ಗಿಬ್ಸ್, ‘ಇನ್ನು ಮುಂದಾದರೂ ನೀವು ಅಂಗಳದಲ್ಲಿ ಕ್ಷೇತ್ರರಕ್ಷಣೆ ಮಾಡುವಾಗ ಮೊದಲಿಗಿಂತಲೂ ತುಸು ವೇಗವಾಗಿ ಓಡಬಹುದೇನೊ ಅಲ್ಲವೇ ಅಶ್ವಿನ್’ ಎಂದು ವ್ಯಂಗ್ಯ ಮಾಡಿದ್ದರು. ಗಿಬ್ಸ್ ಅವರ ಈ ಟ್ವೀಟ್ ಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಅಶ್ವಿನ್, 'ಹೌದು...ನಿಮ್ಮಷ್ಟು ವೇಗವಾಗಿ ಖಂಡಿತವಾಗಿಯೂ ಓಡಲಾಗುವುದಿಲ್ಲ. ಆ ಅದೃಷ್ಟ ನನಗಿಲ್ಲ. ಅದರೆ ಫಿಕ್ಸಿಂಗ್ ನಿಂದ ಹಣ ಗಳಿಸಿ ಬದುಕು ಸಾಗಿಸುವ ದುರ್ಗತಿ ಖಂಡಿತವಾಗಿಯೂ ಬಂದಿಲ್ಲ. ನಾನು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡು ಬದುಕುತ್ತಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದರು.