ಕ್ರಿಕೆಟ್

ಅಯ್ಯಯ್ಯೋ... ಯೋಯೋ ಟೆಸ್ಟ್ ಗೇ ಸಿಒಎ ಪರೀಕ್ಷೆ?

Srinivas Rao BV
ನವದೆಹಲಿ: ಬಿಸಿಸಿಐ ನ ಆಡಳಿತಾತ್ಮ ವ್ಯವಹಾರಗಳಲ್ಲಿ ಲೋಪವುಂಟಾದಾಗ ಮಧ್ಯಪ್ರವೇಶಿಸುತ್ತಿದ್ದ ಸುಪ್ರೀಂ ಕೋರ್ಟ್ ನೇಮಿಸಿರುವ ಸಿಒಎ ಕಣ್ಣು ಈಗ ರಾಷ್ಟ್ರೀಯ ತಂಡವನ್ನು ಆಯ್ಕೆ ಮಾಡುವ ವಿಧಾನ ಹಾಗೂ ಮಾನದಂಡಗಳ ಮೇಲೂ ಬಿದ್ದಂತಿದೆ. 
ಇಂಗ್ಲೆಂಡ್ ಪ್ರವಾಸಕ್ಕಾಗಿ ಟೀಂ ಇಂಡಿಯಾ ತಂಡವನ್ನು ಆಯ್ಕೆ ಮಾಡುವುದಕ್ಕೂ ಮುನ್ನ ವಿರಾಟ್ ಕೊಹ್ಲಿ, ಎಂಎಸ್ ಧೋನಿ ಸೇರಿದಂತೆ ಹಲವು ಆಟಗಾರರು ಫಿಟ್ನೆಸ್ ನ್ನು ಸಾಬೀತುಪಡಿಸಲು ಯೋ ಯೋ ಟೆಸ್ಟ್ ತೆಗೆದುಕೊಂಡಿದ್ದರು. ಈ ಪರೀಕ್ಷೆಯಲ್ಲಿ ಆಂಬಟಿ ರಾಯುಡು ವಿಫಲರಾಗಿದ್ದರು. ಆದರೆ ಈಗ ವಿನೋದ್ ರಾಯ್ ನೇತೃತ್ವದ ಆಡಳಿತಗಾರರ ಸಮಿತಿ ಈಗ ಯೋ ಯೋ ಟೆಸ್ಟ್ ನ್ನೇ ಟೆಸ್ಟ್ ಮಾಡಲು ಉದ್ದೇಶಿಸಿದ್ದಾರಂತೆ.
ಆಂಬಟಿ ರಾಯುಡು ಐಪಿಎಲ್ ಸರಣಿಯಲ್ಲಿ 602 ರನ್ ಗಳನ್ನು ದಾಖಲಿಸಿದ್ದರೂ  ಯೋ ಯೋ ಟೆಸ್ಟ್ ನಲ್ಲಿ ವಿಫಲರಾಗಿದ್ದ ಕಾರಣ ಅವರನ್ನು ಇಂಗ್ಲೆಂಡ್ ಪ್ರವಾಸದಿಂದ ಕೈಬಿಡಲು ನಿರ್ಧರಿಸಲಾಗಿತ್ತು. ಆದರೆ ರಾಷ್ಟ್ರೀಯ ತಂಡವನ್ನು ಆಯ್ಕೆ ಮಾಡಲು ಕೇವಲ  ಯೋ ಯೋ  ಟೆಸ್ಟ್ ನ ಫಲಿತಾಂಶವನ್ನೇ ಏಕೆ ಪ್ರಮುಖ ಮಾನದಂಡವನ್ನಾಗಿ ಪರಿಗಣಿಸಬೇಕು ಎಂಬ ಬಗ್ಗೆ ಸಿಒಎ ಈಗ ಪ್ರಶ್ನೆ ಮಾಡಲು ಸಜ್ಜುಗೊಂಡಿದೆ ಎನ್ನುತ್ತಿವೆ ಬಿಸಿಸಿಐ ನ ಮೂಲಗಳು.
ಬಿಸಿಸಿಐ ಅಧಿಕಾರಿಗಳ ಪ್ರಕಾರ ಮುಂದಿನ ವಾರ ನಡೆಯಲಿರುವ ಸಭೆಯಲ್ಲಿ ವಿನೋದ್ ರಾಯ್ ಈ ಬಗ್ಗೆ ಬಿಸಿಸಿಐ ನ್ನು ಪ್ರಶ್ನಿಸಲಿದ್ದಾರೆ. ವಿನೋದ್ ರಾಯ್ ನೇತೃತ್ವದ ಸಮಿತಿ ಈ ವರೆಗೂ ತಾಂತ್ರಿಕ ವಿಷಯಗಳಲ್ಲಿ ಮಧ್ಯಪ್ರವೇಶ ಮಾಡಿರಲಿಲ್ಲ, ಆದರೆ ಮುಂದಿನ ಸಭೆಯಲ್ಲಿ ಕ್ರಿಕೆಟ್ ತಂಡದ ಆಯ್ಕೆಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಕೇಳುವ ಸಾಧ್ಯತೆ ಇದೆ ಎಂದು ಬಿಸಿಸಿಐ ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ವರೆಗೂ ಆಟಗಾರರ ಫಿಟ್ನೆಸ್ ಟೆಸ್ಟ್ ಮಾಡುತ್ತಿದ್ದ ಯೋ ಯೋ ಟೆಸ್ಟ್ ಗೆ ಈಗ ಸತ್ವ ಪರೀಕ್ಷೆ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 
SCROLL FOR NEXT