ಮುಂಬೈ: ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಲಭಿಸಿದ್ದು, ಸಚಿನ್ ಜೀವನಾಧರಿತ ಚಿತ್ರ 'ಸಚಿನ್ ಎ ಬಿಲಿಯನ್ ಡ್ರೀಮ್ಸ್' ಚಿತ್ರ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ.
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಜೀವನಾಧಾರಿತ ಚಲನಚಿತ್ರ ‘ ಎ ಬಿಲಿಯನ್ ಡ್ರೀಮ್ಸ್’ ಎಕೋಲೇಡ್ ಗ್ಲೋಬಲ್ ಫಿಲ್ಮ್ ಸ್ಪರ್ಧೆ -2018ರಲ್ಲಿ ಶ್ರೇಷ್ಠ ಚಿತ್ರ ಪ್ರಶಸ್ತಿಗೆ ಭಾಜನವಾಗಿದ್ದು, ಸಚಿನ್ ಅವರ ಚಲನಚಿತ್ರ ಪ್ರಶಸ್ತಿ ಪಡೆದಿರುವ ಬಗ್ಗೆ ಬಾಲಿವುಡ್ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದು, ರೀಟ್ವಿಟ್ ಮಾಡಿ ಸಚಿನ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ‘ವಿಶ್ವವನ್ನೇ ಗೆದ್ದಿರುವ ಸಚಿನ್ ಅವರಿಗೆ ಇನ್ನೊಂದು ಪ್ರಶಸ್ತಿ, ‘ದೇವರ ಚಿತ್ರ, ಸಚಿನ್ ನಿಜವಾದ ರಾಕ್ಸ್ ಸ್ಟಾರ್ ಎಂದು ಸಚಿನ್‌ರನ್ನು ಕೊಂಡಾಡಿದ್ದಾರೆ.
ಇನ್ನು 2017ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಈಗಾಗಲೇ ದೀರ್ಘಾವಧಿ ಡಾಕ್ಯುಮೆಂಟರಿ ವಿಭಾಗದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ, 11ನೇ ಟೆಹ್ರಾನ್ ಅಂತಾರಾಷ್ಟ್ರೀಯ ಎಫ್ಐಸಿಟಿಎಸ್ ಉತ್ಸವದಲ್ಲಿ ಡಿಪ್ಲೊಮಾ ಪ್ರಶಸ್ತಿಗಳು ಲಭಿಸಿದ್ದವು. ಈಗ ಇನ್ನೊಂದು ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿದೆ.
ಸಚಿನ್ ಎ ಬಿಲಿಯನ್ ಡ್ರೀಮ್ಸ್ ಚಿತ್ರ ಸಚಿನ್ ಅವರ ವೈಯಕ್ತಿಕ ಹಾಗೂ ಕ್ರಿಕೆಟ್ ಜೀವನದ ಚಿತ್ರಣವಾಗಿದ್ದು, ಜೇಮ್ಸ್ ಎರ್ಸ್ಕೈನ್ ನಿರ್ದೇಶಿಸಿದ್ದಾರೆ. ಚಿತ್ರ ತಮಿಳು, ಹಿಂದಿ, ಇಂಗ್ಲಿಷ್, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.